ಎಳ್ಳು-ಬೆಲ್ಲ
(ದಿನಾಂಕ 1-2-1993 ಧರ್ಮಪ್ರಭ ಮಾಸ ಪತ್ರಿಕೆಯಲ್ಲಿ ಪ್ರಕಟಿಸಲಾಗಿದ್ದ ಲೇಖನ)
ಪ್ರತಿ ವರ್ಷ ಸಂಕ್ರಾಂತಿ ಹಬ್ಬದಲ್ಲಿ ಬಂಧು ಮಿತ್ರರು ಪರಸ್ಪರ ಭೇಟಿಯಾಗಿ “ಎಳ್ಳು ಬೆಲ್ಲ ಕೊಟ್ಟು ಒಳ್ಳೆ ಮಾತಾಡು” ಎಂದು ಹೇಳಿ ಎಳ್ಳು ಬೆಲ್ಲ ಹಂಚಿಕೊಳ್ಳುವ ಸಂಪ್ರದಾಯವಿದೆ. ಇದು ಅನಾದಿ ಕಾಲದಿಂದ ಬೆಳೆದು ಬಂದಿರುವ ಸಂಪ್ರದಾಯವಲ್ಲದೆ ಸಮಾಜದಲ್ಲಿ ಪ್ರೀತಿ ವಿಶ್ವಾಸಗಳು ಭದ್ರವಾಗಿರಬೇಕೆಂಬ ಅತ್ಯುತ್ತಮ ಲಕ್ಷ್ಯವನ್ನು ಹೊಂದಿರುತ್ತದೆ. ಪರಸ್ಪರ ದ್ವೀಪಾಸೂಯೆಗಳು ವಿಕಾರವಾಗಿ ಬೆಳೆಯುತ್ತಿರುವ ಇಂದಿನ ಸಮಾಜದ ಶ್ರೇಯಸ್ಸಿಗಾಗಿ ಪ್ರತಿ ಒಬ್ಬರೂ ಇದರ ಕಡೆ ಗಮನ ಕೊಡಬೇಕಾಗಿದೆ.
ಎಳ್ಳು ಸ್ನೇಹಕ್ಕೆ ಸಂಕೇತ. ಸಂಸ್ಕೃತ ಭಾಷೆಯಲ್ಲಿ ಸ್ನೇಹವೆಂಬ ಶಬ್ದಕೈ ಗೆಳೆತನವೆಂಬ ಅರ್ಥವೂ ಜಿಡ್ಡು ಅಥವಾ ಎಣ್ಣೆ ಎಂಬ ಅರ್ಥವೂ ಇದೆ. ಎರಡರಲ್ಲಿಯು ಅಂಟಿಕೊಳ್ಳುವ ಗುಣವಿದೆ. ಎಣ್ಣೆ ಎಂಬ ಶಬ್ದವನ್ನು ಎಲ್ಲಾ ಎಣ್ಣೆಗಳ ವಿಷಯದಲ್ಲೂ ಬಳಸುತ್ತಿದ್ದೇವೆ. ಸೀಮೆಎಣ್ಣೆಯನ್ನು ಎಣ್ಣೆಯೆಂದೇ ಕರೆಯುತ್ತಿದ್ದೇವೆ. ಆದರೆ ಪ್ರಾಚೀನ ಕಾಲದಲ್ಲಿ ಎಳ್ಳಿನ ಎಣ್ಣೆಗೆ ಮಾತ್ರ ಎಣ್ಣೆ ಎಂದು ಹೆಸರಿತ್ತು. ಎಳ್ ಮತ್ತು ನೆಯ್ ಎಂಬ ಎರಡು ಶಬ್ದಗಳು ಸೇರಿ ಎಣ್ಣೆ ಎಂಬ ಶಬ್ದವಾಗಿದೆ. ಅಂದರೆ ಎಳ್ಳಿನಲ್ಲಿಯ ನೆಯ್ ಎಂದರೆ ಜಿಡ್ಡು ಪದಾರ್ಥಕ್ಕೆ ಎಣ್ಣೆ ಎಂಬ ಹೆಸರು ಬಂತು. ಇಲ್ಲಿ ನೆಯ್ ಎಂಬ ಶಬ್ದವು “ಸ್ನೇಹ” ಶಬ್ದದ ತದ್ಭವ ರೂಪ. ನೆಯ್ ಎಂಬ ಶಬ್ದಕ್ಕೆ ತುಪ್ಪವೆಂಬ ಎಂಬ ಅರ್ಥವಿದೆ. ಆದುದರಿಂದ ಬಹಳ ಪ್ರಾಚೀನ ಕಾಲದಿಂದ ಎಳ್ಳಿಗೂ ಸ್ನೇಹಕ್ಕೂ ಪರಸ್ಪರ ಸ್ನೇಹವು ಬೆಳೆದು ಬಂದಿದೆ.
ಬೆಲ್ಲವನ್ನು ಸಂಸ್ಕೃತ ಭಾಷೆಯಲ್ಲಿ ‘ಗುಡ’ವೆನ್ನುತ್ತಾರೆ. ಗುಡವೆಂಬ ಶಬ್ದವು ಗುಡ-ರಕ್ಷಣೇ ಎಂಬ ಧಾತುವಿನಿಂದ ಹುಟ್ಟಿರುತ್ತದೆ. ಇದಕ್ಕೆ ರಕ್ಷಿಸುವುದು ಎಂದು ಅರ್ಥ. ನಮ್ಮ ತಾತನವರು ಯುವಕರಾಗಿದ್ದಾಗ ಒಂದು ದಿನ ಪರಸ್ಥಳದಲ್ಲಿ ಊಟ ಸಿಗದೆ ಒಂದೆಡು ಬೆಲ್ಲದ ಉಂಡೆಗಳನ್ನು ಮಾತ್ರ ಬಾಯಿಗೆ ಹಾಕಿಕೊಂಡು ನೀರು ಕುಡಿದು ಪ್ರಾಣ ಉಳಿಸಿ ಕೊಂಡಿದ್ದರಂತೆ. ಇದರಲ್ಲಿರುವ ಸಕ್ಕರೆ ಅಂತ ಸಿಹಿ ರುಚಿಯನ್ನು ಮಾತ್ರವಲ್ಲದೆ ಶಕ್ತಿಯನ್ನೂ ಸಹ ಕೊಡುತ್ತದೆ ಎಂದು ತಿಳಿಯಬೇಕಾಗಿದೆ. ಸ್ನೇಹಕ್ಕೆ ಮಾಧುರ್ಯ ಮತ್ತು ಪುಷ್ಟಿಯನ್ನು ಜೋಡಿಸುವುದೇ ಎಳ್ಳು ಬೆಲ್ಲಗಳ ಸಂಗಮದ ಸಂಕೇತ.
ಎಲ್ಲ ಪುರುಷಾರ್ಥಗಳಿಗೂ ಮೂಲಭೂತವೂ ಮೊದಲನೆಯದೂ ಆಗಿರುವ ಧರ್ಮ ಪುರುಷಾರ್ಥವು ಸಹಕಾರದ ಮೇಲೆ ನಿಂತಿದೆ. ಆದುದರಿಂದ ಎಳ್ಳು ಬೆಲ್ಲಗಳ ಸಂಕೇತವು ಧರ್ಮದ ಸಂಕೇತವೇ ಆಗಿದೆ.
ಲಂಕಾ ಕೃಷ್ಣಮೂರ್ತಿ
ಸಹಾಯಕ ಸಂಪಾದಕ
