ಕೊಡೆಯ ಗೋಪಾಲ – 9
೭
ಗಗನ ಮಹಲಿನಲ್ಲಿ ಮಂತ್ರಾಲೋಚನಾ ಮಂದಿರದಲ್ಲಿ ಘನಗಿರಿ ಮಹಾರಾಜನಾದ ರುದ್ರಸಿಂಹನು ಒಬ್ಬನೇ ಆಲೋಚನಾಪರನಾಗಿ ಕುಳಿತಿದ್ದನು. ಆಗ ಸೂರ್ಯೋದಯಾನಂತರ ಸುಮಾರು ಎಂಟು ಗಳಿಗೆಗಳು ಕಳೆದಿದ್ದವು. ಅಲೋಚನಾ ಮಂದಿರದ ಬಾಗಿಲಿನ ಹೊರಗೆ ಒಬ್ಬ ದ್ವಾರಪಾಲಕನೂ ಮತ್ತು ಒಬ್ಬ ಪರಿಚಾರಕನೂ ಮಾತ್ರ ನಿಂತಿದ್ದರು. ರಾಜನು ತನ್ನ ಸಿಂಹಾಸನದ ಪಕ್ಕದಲ್ಲಿ ಒಂದು ಜಾಗಟೆಯನ್ನು ಇಟ್ಟು ಕೊಂಡಿದ್ದನು. ಅದನ್ನು ರಾಜನು ಒಂದು ಸಲ ಬಾರಿಸಿದರೆ ಪರಿಚಾರಕನೂ ಎರಡು ಸಲ ಬಾರಿಸಿದರೆ ದ್ವಾರಪಾಲಕನೂ ಮಂದಿರದೊಳಗೆ ಪ್ರವೇಶ ಮಾಡಿ ರಾಜನ ಹತ್ತಿರಕ್ಕೆ ಬರಬೇಕೆಂದು ಸಂಕೇತವಿತ್ತು. ರಾಜನು ತನ್ನಷ್ಟಕ್ಕೆ ತಾನೇ ಹೇಳಿ ಕಳುಹಿಸುವವರೆಗೂ ಪ್ರಧಾನಿ ಮೊದಲುಗೊಂಡು ಇನ್ನಾರಿಗೂ ಒಳಗಡೆ ಪ್ರವೇಶವಿರಲಿಲ್ಲ. ಆಲೋಚನಾ ಮಂದಿರದೊಳಗೆ ಯಾರೇನು ಮಾತನಾಡಿದರೂ ಹೊರಗೆ ನಿಂತಿದ್ದ ದ್ವಾರಪಾಲಕನಿಗಾಗಲಿ, ಪರಿಚಾರಕನಿಗಾಗಲೀ, ಇನ್ನಾರಿಗಾಗಲಿ ಕೇಳಿಸುತ್ತಿರಲಿಲ್ಲ.
ಪ್ರಧಾನಿ ಬಂದು ಆಲೋಚನಾ ಮಂದಿರದ ಬಾಗಿಲಿನ ಹೊರಗೆ ಕಾದಿದ್ದನು. ಪ್ರಧಾನಿಯ ಆಗಮನವನ್ನು ತಿಳಿಸುವುದಕ್ಕೋಸುಗ ಪರಿಚಾರಕನು ಒಳಗೆ ಹೋಗುವಂತಿರಲಿಲ್ಲ. ರುದ್ರಸಿಂಹನ ಆಜ್ಞೆಯೆಂದರೆ ಅಷ್ಟು ಕಠಿಣವಾದದ್ದು. ಅದನ್ನು ಮೀರಿ ನಡೆದವರಿಗೆ ಕಠಿಣ ಶಿಕ್ಷೆ. ರಾಜನ ಆಜ್ಞೆಯನ್ನು ಪರಿಪಾಲಿಸಿ ಆತನ ಮೆಚ್ಚುಗೆಯನ್ನು ಪಡೆದವರಿಗೆ ರಾಜನ ಮನಸ್ಸಿಗೆ ಬಂದಂತೆ ವಿಪುಲವಾದ ಸಂಭಾವನೆ ಸಿಗುತ್ತಿತ್ತು. ರುದ್ರಸಿಂಹನು ಸತ್ಯಕ್ಕೆ ಹೆಚ್ಚು ಬೆಲೆಯನ್ನು ಕೊಡುತ್ತಿದ್ದನು. ತನ್ನ ವಂಶದ ಅರಸರೆಲ್ಲಾ ಸತ್ಯ ವಾಕ್ಯ ಪರಿಪಾಲನೆಗೆ ಹೆಸರುವಾಸಿಯಾದವರೆಂದೂ ತಾನು ಸತ್ಯ ವಾಕ್ಯ ಪರಿಪಾಲನೆ ಮಾಡಿ ಆ ಹೆಸರನ್ನು ಉಳಿಸಬೇಕೆಂದೂ ಆತನು ಭಾವಿಸಿದ್ದನು. ಆತನಿಗೆ ಒಳ್ಳೆಯ ವಿವೇಕವಿರಲಿಲ್ಲ. ಆದರೆ ತಾನು ಯಾವುದನ್ನು ಒಳ್ಳೆಯದೆಂದು ಭಾವಿಸಿದರೂ ಅದರಲ್ಲಿ ತೀವ್ರ ನಿಷ್ಠೆಯನ್ನು ತೋರಿಸುತ್ತಿದ್ದನು.
ಹೊರಗೆ ನಿಂತಿದ್ದ ಪ್ರಧಾನಿ ಈ ದಿನ ಮಹಾರಾಜನು ಏಕೆ ಇಷ್ಟು ತಡವಾದರೂ ಜಾಗಟೆಯನ್ನು ಬಾರಿಸದೆ ತನ್ನ ಆಗಮನವನ್ನು ತಿಳಿದುಕೊಳ್ಳದೆ ಇದ್ದಾನೆ? ಏನೋ ಬಹಳ ಆಲೋಚಿಸುತ್ತಿದ್ದಂತಿದೆ. ಏನಿರಬಹುದು? ಎಂದು ಊಹಾ ಪೋಹಗಳಲ್ಲಿ ಅಲೆದಾಡುತ್ತಿದ್ದನು. ರಾಜ ಭಕ್ತನಾದ ಪ್ರಧಾನಿಯು ತಡವಾದಂತೆಲ್ಲ ರಾಜನು ಆರೋಗ್ಯವಂತನಾಗಿ ಇದ್ದಾನಲ್ಲವೆ? ಆತನು ತಡಮಾಡುವುದಕ್ಕೆ ಆಲೋಚನಾ ಮಗ್ನತೆ ಅಲ್ಲದೆ ಇನ್ನಾವ ಕಾರಣವೂ ಇರಲಾರದಲ್ಲವೇ? ಎಂಬುದಾಗಿಯೂ ಒಂದು ಕಡೆ ಯೋಚಿಸುತ್ತಿದ್ದನು.
ಕೊನೆಗೆ ಜಾಗಟೆಯ ಶಬ್ದ ಕೇಳಿಬಂತು. ಪರಿಚಾರಕನು ವೇಗವಾಗಿ ರಾಜನ ಸಮೀಪಕ್ಕೆ ಓಡಿ ಹೋದನು. ರಾಜನು ಪರಿಚಾರಕನನ್ನು ಹೊರಗಡೆ ಯಾರಾದರೂ ಕಾದಿರುವರೇ ಎಂದು ಕೇಳಿದನು. ಹೊರಗಡೆ ಪ್ರಧಾನಿ ಕಾದಿರುವನೆಂದು ಪರಿಚಾರಕನು ತಿಳಿಸಿದನು. ಅದಕ್ಕೆ ರುದ್ರಸಿಂಹನು “ಪ್ರಧಾನಿಯೊಂದಿಗೆ ಆಲೋಚನೆ ಮಾಡಲು ಈಗ ಅವಕಾಶವಿಲ್ಲ. ಪುನಃ ಮೂರನೆಯ ಯಾಮದ ಕೊನೆಯ ಭಾಗದಲ್ಲಿ ಬರಬೇಕಾಗಿ ಪ್ರಧಾನಿಗೆ ತಿಳಿಸು. ಎಂದು ಪರಿಚಾರಕನಿಗೆ ಹೇಳಿದನು. ಪರಿಚಾರಕನು ಈ ವಿಷಯವನ್ನು ಪ್ರಧಾನಿಗೆ ತಿಳಿಸಿದನು. ಪ್ರಧಾನಿಯೊಂದಿಗೆ ಮಾತನಾಡಲು ಅವಕಾಶವಿಲ್ಲವೆಂದು ರುದ್ರಸಿಂಹನು ಹೇಳಿದುದು ಇದೇ ಮೊದಲನೆಯ ಬಾರಿ. ಇದರಿಂದ ಪ್ರಧಾನಿಗೆ ಸಂಶಯವೂ, ಅವನ ಮನಸ್ಸಿಗೆ ನೋವೂ ಆದವು. ಆದರೂ ಆತನು ರಾಜನ ಹಿತಚಿಂತಕನಾಗಿದ್ದುದರಿಂದ ತನ್ನ ಮನೋ ವಿಕಾರವನ್ನು ಮುಖದಲ್ಲಿ ತೋರಿಸದೆ “ಪ್ರಭುಗಳ ಅಪ್ಪಣೆ” ಎಂದು ಹೇಳಿ ಹಿಂತಿರುಗಿದನು. ಹಿಂತಿರುಗುವಾಗ ಪ್ರಧಾನಿಯು ತಾನು ಬಾಗಿಲಿನ ಬಳಿ ಬಹಳ ಹೊತ್ತು ಕಾದಿದ್ದನ್ನೂ ತಾನು ಹಿಂತಿರುಗಿ ಹೋಗುವುದನ್ನೂ, ಗಮನಿಸುತ್ತಾ ನಿಂತಿದ್ದು ತಾನು ಹಿಂತಿರುಗಿದ ಕೂಡಲೇ ರಾಣಿ ವಾಸಕ್ಕೆ ಓಡಿಹೋದ ರಾಣಿಯ ಸಖಿಯೊಬ್ಬಳನ್ನು ಗಮನಿಸಿದನು. ಸೂಕ್ಷ್ಮ ಬುದ್ದಿಯಾದ ಪ್ರಧಾನಿಗೆ ಇವಳ ಪ್ರವರ್ತನೆ ಸಂದೇಹವನ್ನುಂಟು ಮಾಡಿತು. ಆದರೆ ಅವಳು ಸ್ವಭಾವತಃ ಅಮಾಯಕಳೆಂದೂ, ಯಾರ ಪ್ರೇರೇಪಣೆಯಿಂದಲೋ ಬಂದು ತನ್ನ ಆಗಮನ ನಿರ್ಗಮನಗಳನ್ನು ಗಮನಿಸುತ್ತಿದ್ದು ಓಡಿ ಹೋದವಳೆಂದೂ ಆತನು ಊಹೆ ಪಟ್ಟನು. ತನ್ನ ಮನೆಗೆ ಹೋದ ಕೂಡಲೆ ಅವಳಿಗೆ ಆಪ್ತಳೂ ತನಗೆ ನಂಬಿಕೆಯುಳ್ಳವಳೂ ಆದ ಪರಿಚಾರಿಕೆಯನ್ನೊಬ್ಬಳನ್ನು ಅವಳ ಬಳಿಗೆ ಹೋಗಿ ಉಪಾಯದಿಂದ ಸಮಾಚಾರವನ್ನು ತಿಳಿದುಕೊಂಡು ಬರಬೇಕೆಂದು ಕಳುಹಿಸಿದನು. ಮಧ್ಯಾಹ್ನದ ವೇಳೆಗೆ ಆಕೆಯು ಹಿಂತಿರುಗಿ ಬಂದು ತನಗೆ ಗೊತ್ತಾದ ವಿಷಯಗಳನ್ನು ಪ್ರಧಾನಿಗೆ ಅರಿಕೆ ಮಾಡಿದಳು.
ನಡೆದ ಸಂಗತಿ ಹೀಗಿತ್ತು. ಸೈನ್ಯದಲ್ಲಿ ಕಾಲಾಳುಗಳು, ಕುದುರೆಯ ಸವಾರರು, ಆನೆಯ ಸವಾರರು ಎಂಬ ಮೂರು ತೆರದ ವಿಭಾಗಗಳಿದ್ದುದಲ್ಲದೆ ಒಂದೊಂದು ವಿಭಾಗದಲ್ಲಿಯೂ ಸೈನಿಕ, ನಾಯಕ, ಮಹಾನಾಯಕ, ದಂಡ ನಾಯಕ, ಎಂಬ ಹುದ್ದೆಗಳು ಇದ್ದವು. ಸೈನ್ಯದಲ್ಲಿ ಕೆಲವರು ಅರಸು ಮನೆತನಕ್ಕೆ ಸೇರಿದವರೂ, ಅರಸು ಬಂಧುಗಳೂ ಇದ್ದರು. ಅಂತಹವರಲ್ಲಿ ಜಯ ಸಿಂಹನೆಂಬ ಅರಸು ಮನೆತನದವನು ಆನೆಯ ಸವಾರನಾಗಿದ್ದನು. ಅತನ ಹೆಂಡತಿಯ ಹೆಸರು ಗೌರಾಂಬೆ. ಸೈನಿಕರಿಗೆ ಉನ್ನತ ಹುದ್ದೆಗಳಿಗೆ ಬಡ್ತಿಯನ್ನು ಕೊಡುವ ಅಧಿಕಾರವನ್ನು ಪ್ರಧಾನಿಯೂ, ಸೈನ್ಯಾಧಿಪತಿಯೂ ರಾಜಾಜ್ಞೆಗೆ ಒಳಪಟ್ಟು ನಿರ್ವಹಿಸುತ್ತಿದ್ದರು. ಎರಡು ದಿನಗಳ ಹಿಂದೆ ಪ್ರಧಾನಿಯೂ, ಸೈನ್ಯಾಧಿಪತಿಯೂ ಸೇರಿ ಬಡ್ತಿ ಕೊಡುವುದಕ್ಕೆ ಯೋಗ್ಯರಾದ ಆನೆಯ ಸವಾರರನ್ನು ಪರೀಕ್ಷಿಸಿ ಆಯ್ಕೆ ಮಾಡಿ ಕೆಲವರಿಗೆ ಮಾತ್ರ ಬಡ್ತಿಯನ್ನು ಕೊಟ್ಟಿದ್ದರು ಅವರಲ್ಲಿ ಜಯಸಿಂಹನಿಗೆ ಬಡ್ತಿ ಕೊಡಲಿಲ್ಲ. ಗೌರಾಂಬೆಯು ತನ್ನ ಗಂಡನಿಗೆ ಬಡ್ತಿ ತಪ್ಪದೆ ಆಗುವುದೆಂದು ಬಹಳ ಅಸೆಯಿಂದಿದ್ದಳು. ಅವಳಿಗೆ ನಿರಾಶೆಯಾದಂತಲ್ಲದೆ ಬಡ್ತಿ ಸಿಕ್ಕಿದ್ದ ಇನ್ನೊಬ್ಬ ಆನೆಯ ಸವಾರನ ಹೆಂಡತಿಯು ಇವಳನ್ನು ಪರಿಹಾಸ ಮಾಡಿದಳು. “ಅರಸು ಮನೆತನದವರಿಗೆ ಬಡ್ತಿ ಮೀಸಲಾಗಿಟ್ಟಿಲ್ಲ. ನಮ್ಮ ಯಜಮಾನರು ಅದೃಷ್ಟವಂತರು. ನಿಮ್ಮ ಯಜಮಾನರಿಗೆ ಅದೃಷ್ಟವಿಲ್ಲ” ಎಂದೂ ಆಡಿದಳು. ಅಷ್ಟೇ ಅಲ್ಲದೆ ದುರಾವೇಶದಲ್ಲಿ “ಅದೃಷ್ಟವಿಲ್ಲದಿದ್ದರೆ ಮಹಾರಾಜನೇ ಭಿಕಾರಿಯಾಗುವನು. ಅದೃಷ್ಟವಿದ್ದರೆ ಭಿಕಾರಿಯೂ ಮಹಾರಾಜನಾಗುವನು. ನೀನು ಅರಸುಗಳ ಬಂಧುವೆಂದು ಹೆಮ್ಮೆ ಪಟ್ಟರೆ ಅದೃಷ್ಟ ಕೈ ಹಿಡಿಯುವುದೇ?” ಎಂದೂ ಆಡಿದಳು. ಇದು ಗೌರಾಂಬೆಯ ಮನಸ್ಸಿಗೆ ತೀವ್ರಾಘಾತವನ್ನುಂಟುಮಾಡಿತು. ಅವಳು ಪೆಟ್ಟುತಿಂದ ನಾಗರ ಹಾವಿನಂತೆ ಮನಸ್ಸಿನಲ್ಲೇ ರೇಗಿದಳು. ಆದರೆ ಪ್ರತ್ಯುತ್ತರ ಕೊಡಲಾರದೆ ಬಾಯಿ ಮುಚ್ಚಿಕೊಂಡು ಬುಸುಗುಟ್ಟಿದಳು. ಒಂದು ಕ್ಷಣವೂ ಅಲ್ಲಿ ನಿಲ್ಲಲರದೆ ನೇರವಾಗಿ ರಾಜಾಂತಃಪುರಕ್ಕೆ ಹೋದಳು. ಅವಳು ಅರಸು ಬಂಧುವಾಗಿದ್ದುದರಿಂದ ಯಾವಾಗಲಾದರೂ ಅವಳಿಗೆ ರಾಣಿಯೊಂದಿಗೆ ಭೇಟಿ ಲಭಿಸುತ್ತಿತ್ತು. ಅವಳು ಹೇಗೋ ರಾಣಿಯನ್ನು ನೋಡಿ ಅವಳಿಗೆ ತನಗೂ ಅರಸು ಮನೆತನಕ್ಕೂ, ಮಹಾರಾಜನಿಗೂ ಅವಮಾನಕರವಾಗಿ ಬಡ್ತಿ ಸಿಕ್ಕಿದ ಸೈನಿಕನ ಹೆಂಡತಿ ಆಡಿದ ಮಾತುಗಳನ್ನೆಲ್ಲಾ ತಿಳಿಸಿದಳು. ಇದರಿಂದ ರಾಣಿಗೆ ಬಹಳ ಕೋಪ ಬಂದಿತು. ಅವಳು ಹಿಂದಿನ ರಾತ್ರಿ ಈ ವಿಷಯವನ್ನು ರುದ್ರಸಿಂಹನಿಗೆ ತಿಳಿಸಿದ್ದಳು. ಆದುದರಿಂದಲೇ ರುದ್ರಸಿಂಹನು ಅಂದಿನ ಬೆಳಿಗ್ಗೆ ಮಂತ್ರಾಲೋಚನಾ ಮಂದಿರದಲ್ಲಿ ಬಹಳ ಹೊತ್ತು ಯೋಚನೆ ಮಾಡುತ್ತಿದ್ದು ಪ್ರಧಾನಿಯೊಂದಿಗೆ ಈ ವಿಷಯನನ್ನು ಚರ್ಚಿಸಲು ಇಷ್ಟವಿಲ್ಲದೆ ಆತನನ್ನುಹಿಂದಕ್ಕೆ ಕಳುಹಿಸಿದ್ದು.
ರಾಜಭಕ್ತನಾದ ಪ್ರಧಾನಿಯು ರಾಜನ ಮತ್ತು ರಾಣಿಯ ಮನಸ್ಸಿಗೆ ಸಮಾಧಾನ ಮಾಡುವುದಕ್ಕೂ, ಬಡ್ತಿಗಳನ್ನು ಕೊಟ್ಟ ವಿಷಯದಲ್ಲಿ ತನಗೂ ಸೈನ್ಯಾಧಿಪತಿಗೂ ಯಾವ ದೋಷಾರೋಪಣೆ ಬಾರದಿರುವುದಕ್ಕೂ ಏನು ಮಾಡಬೇಕೆಂದು ಯೋಚಿಸ ತೊಡಗಿದನು. ಪ್ರಧಾನಿಯು ರಾಜನ ಅಪ್ಪಣೆಯಂತೆ ಪುನಃ ಮೂರನೆಯ ಯಾಮದ ಕೊನೆಯಲ್ಲಿ ಆಲೋಚನಾಮಂದಿರಕ್ಕೆ ಹೋಗಿ ಬಾಗಿಲಿನ ಬಳಿ ಕಾದಿದ್ದನು. ರಾಜನು ಒಳಗಡೆಯಿಂದ ಜಾಗಟೆಯನ್ನು ಬಾರಿಸಿದನು. ಪರಿಚಾರಕನು ಒಳಕ್ಕೆ ಓಡಿಹೋಗಿ, ಪ್ರಧಾನಿಯು ಬಂದು ಪ್ರಭುಗಳ ಅಪ್ಪಣೆಗಾಗಿ ಕಾದಿರುವರೆಂದು ತಿಳಿಸಿದನು. ಅಷ್ಟು ಹೊತ್ತಿಗಾಗಲೇ ಮನಸ್ಸಿನ ಆವೇಶವು ಸ್ವಲ್ಪ ಕಡಿಮೆಯಾಗಿದ್ದ ರುದ್ರಸಿಂಹನು ಪ್ರಧಾನಿಯನ್ನು ಒಳಕ್ಕೆ ಕರೆಸಿಕೊಂಡನು. ಪ್ರಧಾನಿಯು ರಾಜನನ್ನು ಸಮೀಪಿಸಿದ ಕೂಡಲೇ ರಾಜನು ತಟ್ಟನೆ ಎದ್ದು “ರಾಣೀವಾಸಕ್ಕೆ ಹೋಗೋಣ ಬನ್ನಿ” ಎಂದು ಸ್ವಲ್ಪ ಕೋಪದಿಂದ ಪ್ರಧಾನಿಗೆ ಹೇಳಿ ಆತನನ್ನು ರಾಣಿವಾಸಕ್ಕೆ ಕರೆದುಕೊಂಡು ಹೋದನು.
ಮಹಾರಾಣಿಯು ಚಿಂತಾಕ್ರಾಂತಳಾಗಿದ್ದಳು. ಅವಳು ಎಂದಿನಂತೆ ಮಹಾರಾಜನನ್ನು ಕರೆದುಕೊಂಡು ಹೋಗುವುದಕ್ಕೆ ಸಂತೋಷದಿಂದ ಎದ್ದು ಬರಲಿಲ್ಲ. ಇವರು ಬರುತ್ತಿರುವುದನ್ನು ಕಂಡು ಸಿಂಹಾಸನದ ಬಳಿಯಲ್ಲಿಯೇ ಎದ್ದು ನಿಂತುಕೊಂಡಳು; ಇವರನ್ನು ಮಾತುಗಳಿಂದ ಸ್ವಾಗತಿಸಲೂ ಇಲ್ಲ. ಪ್ರಧಾನಿಗೆ ನಡೆದ ಸಂಗತಿ ತಿಳಿದಿದ್ದರೂ ಆತನು ಏನೂ ತಿಳಿಯದಿರುವವನಂತೆಯೇ ಪ್ರವರ್ತಿಸಿದನು; ರಾಜನನ್ನೂ, ರಾಣಿಯನ್ನೂ “ಈ ದಿನ ತಾವಿಬ್ಬರೂ ಅಸಮಾಧಾನ ಚಿತ್ತರಾಗಿರುವುದಕ್ಕೆ ಕಾರಣವೇನೋ ಈ ಹಿತಚಿಂತಕನಿಗೆ ತಿಳಿಯಲಿಲ್ಲವಲ್ಲಾ’ ಎಂದು ಬಹಳ ವಿನಯದಿಂದ ಮಾತನಾಡಿಸಿದನು. ಇಬ್ಬರೂ ಪ್ರಧಾನಿಗೆ ನಡೆದ ಸಂಗತಿಯನ್ನು ತಿಳಿಸಿದರು. ಮಾತಾಡುವುದರಲ್ಲಿ ರಾಣಿಯು ರಾಜನಿಗಿಂತಲೂ ಸ್ವಲ್ಪ ನಿರ್ದಾಕ್ಷಿಣ್ಯಳಾಗಿದ್ದಳು. ಅಲ್ಲದೆ ಆಕೆ ಪ್ರಧಾನಿಯನ್ನು ಕುರಿತು “ನೀವು ಬಡ್ತಿಗೆ ಆಯ್ಕೆ ಮಾಡುವುದರಲ್ಲಿ ಅರಸುಬಂಧುಗಳಿಗೆ ತಕ್ಕ ಮರ್ಯಾದೆಯನ್ನು ತೋರಿಸಬೇಕಾಗಿತ್ತು.”ಎಂದೂ ನುಡಿದಳು; ಅಲ್ಲದೆ “ಅರಸು ಬಂಧುಗಳೆಲ್ಲರೂ ತೆಲುಗು ಮಾತನಾಡುವವರು. ನೀವು ನಮ್ಮೊಂದಿಗೆ ತೆಲುಗಿನಲ್ಲೇ ಮಾತನಾಡಿದರೂ ನಿಮ್ಮ ಮನೆ ಭಾಷೆ ತಮಿಳು. ಅರಸು ಮನೆತನದವರ ಮೇಲೆ ನಿಮಗೆ, ಅಭಿಮಾನವು ತಾನೇ ಹೇಗೆ ಇದ್ದೀತು” ಎಂದೂ ಹೇಳಿದಳು. ಅಲ್ಪ ವಿದ್ಯಾವಂತರು ಸ್ವಾರ್ಥಕ್ಕಾಗಿ ಎಬ್ಬಿಸಿದ್ದ ಭಾಷಾದ್ವೇಷವೆಂಬ ಬೆಂಕಿಯ ಹೊಗೆಯನ್ನು ಪ್ರಧಾನಿಯು ರಾಣಿಯ ಮಾತುಗಳಲ್ಲಿ ಕಂಡನು. ಪ್ರಧಾನಿಯು ಬಡ್ತಿಯ ಆಯ್ಕೆಯನ್ನು ಮಾಡುವುದಕ್ಕೆ ತಾನೂ, ಸೈನ್ಯಾಧಿಪತಿಯೂ, ಸೈನಿಕರನ್ನು ಯಾವ ಯಾವ ವಿಷಯಗಳಲ್ಲಿ ಪರೀಕ್ಷೆಮಾಡಿದರೋ ಯಾವ ಯಾವ ಗುಣಾಗುಣಗಳನ್ನು ಗಮನಿಸಿ ಆಯ್ಕೆ ಮಾಡಿದರೋ ಎಲ್ಲವನ್ನೂ ವಿವರವಾಗಿ ತಿಳಿಸಿ, ತನಗೆ ತಮಿಳು ಮಾತನಾಡುವವರ ಮೇಲೆ ಪ್ರತ್ಯೇಕ ಅಭಿಮಾನವಾಗಲಿ ಇತರ ಭಾಷೆಗಳನ್ನು ಮಾತನಾಡುವವರಲ್ಲಿ ದ್ವೇಷಾಸೂಯೆಗಳಾಗಲೀ ಇಲ್ಲವೆಂದು ಹೇಳಿದನು. ಅತಿಯಾಗಿ ಮಾತನಾಡಿದ ಬಡ್ತಿಯಾದ ಸೈನಿಕನ ಹೆಂಡತಿಯನ್ನು ಸೈನ್ಯಾಧ್ಯಕ್ಷರ ಮುಂದೆ ವಿಚಾರಣೆಗೆ ಒಳಪಡಿಸಿ ಆವಳಿಗೆ ತಕ್ಕ ಶಿಕ್ಷೆಯನ್ನು ಮಾಡಿಸುವುದಾಗಿಯೂ ಹೇಳಿದನು. ರುದ್ರಸಿಂಹನು ಇನ್ನು ಮುಂದೆ ಬಡ್ತಿಯ ವಿಚಾರದಲ್ಲಿ ಅರಸು ಬಂಧುಗಳಿಗೆ ಪ್ರತ್ಯೇಕತೆಯನ್ನು ತೋರಿಸುವ ಶಾಸನವನ್ನು ಜಾರಿಗೆ ತರಬೇಕೆಂದು ಆಜ್ಞಾಪಿಸಿದನು. ರಾಜನ ಸ್ವಭಾವವನ್ನರಿತ ಪ್ರಧಾನಿಯು ತನ್ನ ಮನಸ್ಸಿಗೆ ಇಷ್ಟ ಎಲ್ಲದಿದ್ದರೂ ಅಂತಹ ಶಾಸನವನ್ನು ಕೂಡಲೇ ಜಾರಿಗೆ ತರುವುದಾಗಿ ಹೇಳಿದನು.
ಇದರಿಂದ ರಾಜನಿಗೂ ರಾಣಿಗೂ ಮನಸ್ಸಿಗೆ ಸಮಾಧಾನವುಂಟಾಯಿತು. ಆ ವೇಳೆಗೆ ಸರಿಯಾಗಿ ಹಿಂದೆಯೇ ಏರ್ಪಾಟಾದಂತೆ ಗೋಪಾಲನು ಕೆಲಸಕ್ಕೆ ಬಂದು ತನ್ನ ತಂದೆ ಹಿಡಿಯುತ್ತಿದ್ದ ಕೊಡೆಯನ್ನು ತೆಗೆದುಕೊಂಡು ಬಂದು ಕೊಡೆಯನ್ನು ಒಂದು ಕಡೆ ಇಟ್ಟು, ರಾಜನಿಗೂ ರಾಣಿಗೂ ಪ್ರಧಾನಿಗೂ ಸಮಸ್ಯಾರ ಮಾಡಿ ಕೊಡೆಯನ್ನು ಬಿಚ್ಚಿ ನಿಲ್ಲಿಸಿ, ತಾನು ರಾಜನ ಮತ್ತು ರಾಣಿಯ ಸೇವೆಗಾಗಿ ಸಿದ್ಧವಾಗಿ ನಿಂತನು. ಪ್ರಧಾನಿಯು ಗೋಪಾಲನು ಯೋಗ್ಯವೆಂದು ತಾನು ಪರೀಕ್ಷಿಸಿ ತಿಳಿದುಕೊಂಡಿರುವನೆಂದು ರಾಜನಿಗೂ ರಾಣಿಗೂ ತಿಳಿಸಿದನು. ಅಲ್ಲಿಂದ ರಾಜನೂ ರಾಣಿಯೂ ಗಗನಮಹಲಿಗೆ ಸ್ವಲ್ಪ ದೂರದಲ್ಲಿ ಉದ್ಯಾನವನದಲ್ಲಿದ್ದ ವಿಹಾರ ಮಂಟಪಕ್ಕೆ ತೆರಳಿದರು. ಪ್ರಧಾನಿಯು ಸಲ್ಪ ದೂರ ಅವರನ್ನು ಹಿಂಬಾಲಿಸಿದನು. ಗೋಪಾಲನ್ನು ಕೊಡೆಯನ್ನು ಕಾಡಿತು ರಾಜ ದಂಪತಿಗಳನ್ನು ವಿಹಾರಮಂಟಪಕ್ಕೆ ಅನುಸರಿಸಿ ತನ್ನ ಕೆಲಸವನ್ನು ಅವರ ಮನಮೆಚ್ಚುವಂತೆ ಮಾಡಿದನು. ವಿಹಾರಮಂಟಪವನ್ನು ಒಳಹೊಕ್ಕು
ರಾಜದಂಪತಿಗಳು ಅಲ್ಲಿ ಕುಳಿತುಕೊಂಡು ಏನೋ ಮಾತನಾಡಿ ಕೊಳ್ಳುತ್ತಿದ್ದರು. ಬಹುಶಃ ಆ ಮಾತುಗಳಲ್ಲಿ ಗೋಪಾಲನ ಧೀರ ರಮ್ಯವಾದ ಮೂರ್ತಿಯ ಮತ್ತು ಕರ್ತವ್ಯ ನಿಷ್ಠೆಯ ಪ್ರಶಂಸೆಯೂ ಸೇರಿರಬಹುದು. ಗೋಪಾಲನೂ, ಇತರ ಪರಿಚಾರಕರೂ ಸ್ವಲ್ಪ ದೂರದಲ್ಲಿ ನಿಂತಿದ್ದರು.
ಸ್ವಲ್ಪ ಹೊತ್ತಿಗೆ ಬಹಳ ಸಂತೋಷದಿಂದ ಪ್ರಧಾನಿಯು ವಿಹಾರ ಮಂಟಪಕ್ಕೆ ಒಬ್ಬ ಗೂಢಚಾರನೊಡನೆ ಬಂದು ರಾಜನ ಅಪ್ಪಣೆ ಪಡೆದು ರಾಜನನು ಸಂದರ್ಶಿಸಿದನು. ಗೂಢಚಾರನು ಹೇಮಗಿರಿ ರಾಜ್ಯದಿಂದ ಸಮಾಚಾರವನ್ನು ತಂದಿದ್ದನು. ಮುದುಕನಾಗಿದ್ದ ಬಲದೇವನು ಪಟ್ಟದಾನೆಯಿಂದ ಕೆಳಗೆ ಬಿದ್ದನೆಂಬ ಹಾಗೂ ಆತನಿಗೆ ಗಾಯಗಳಾಗಿವೆಯಂಬ ವಾರ್ತೆಯನ್ನು ಗೂಢಚಾರನು ರಾಜನಿಗೆ ತಿಳಿಸಿದನು. ರಾಜನು ಇದರಿಂದ ಬಹಳ ಸಂತೋಷಪಟ್ಟು ಗೂಢಚಾರನಿಗೂ, ಗೋಪಾಲನಿಗೂ, ಇತರ ಪರಿಚಾರಕರಿಗೂ ಸಂಭಾವನೆಗಳನ್ನು ಕೊಟ್ಟನು. ಅಲ್ಲದೆ, ಎಷ್ಟೋ ದಿವಸಗಳಿಂದ ದ್ರೋಹಿಯಾದ ಬಲದೇವನ ಉನ್ನತಿಯಿಂದ ಮತ್ತು ಉದ್ಧತಿಯಿಂದ ಮನಸ್ಸಿನಲ್ಲಿ ಚಿಂತಿಸುತ್ತಿದ್ದ ತನಗೆ ಆ ದಿನ ಮೊದಲನೆಯ ಬಾರಿ ಸ್ವಲ್ಪ ಚಿಂತಾ ಪ್ರಶಮನವಾಯಿತೆಂದೂ, ಇದು ಗೋಪಾಲನು ಛತ್ರಧಾರಿಯಾಗಿ ಬಂದ ಕೂಡಲೇ ಆಗಿರುವುದು ಒಂದು ವಿಶೇಷವೆಂದೂ, ಇದು ಹೀಗೆಯೇ ಮುಂದುವರಿದು ತನ್ನ ಚಿರಕಾಲ ವಾಂಛಿತವು ಈಡೇರಲಿರುವ ಸೂಚನೆಯೆಂದೂ ಹೇಳಿದನು. ಅಂದಿನಿಂದ ರಾಜನಿಗೂ ರಾಣಿಗೂ ಮಿಕ್ಕವರಿಗೆಲ್ಲಾ ಗೋಪಾಲನ ಮೇಲೆ ವಿಶೇಷ ಅಭಿಮಾನ ವುಂಟಾಯಿತು.
