ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 8
ವೇದಗಳಲ್ಲಿ ಅಥವಾ ಉಪನಿಷತ್ತುಗಳಲ್ಲಿ ಪುರಾಣಗಳ ಉಲ್ಲೇಖ
(ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ಓದುಗರಪತ್ರಗಳಿಗೆ ದಿ.ಲಂಕಾ
ಕೃಷ್ಣಮೂರ್ತಿಯವರು ಕೊಟ್ಟ ಉತ್ತರದ ಲೇಖನ)
ಉತ್ತರ:- ಅರುಣಪ್ರಶ್ನೆ ಎಂಬ ವೇದ ಭಾಗದಲ್ಲಿ ಕೆಳಕಂಡ ಮಂತ್ರವಿರುತ್ತದೆ.
ಪ್ರಶ್ನೆ:- ಯಾವ ವೇದಗಳಲ್ಲಿ ಅಥವಾ ಉಪನಿಷತ್ತುಗಳಲ್ಲಿ ಪುರಾಣಗಳ ಉಲ್ಲೇಖವಿದೆ?
ಸ್ಮೃತಿಃ ಪ್ರತ್ಯಕ್ಷಮೈತಿಹ್ಯಂ
ಅನುಮಾನಶ್ಚ ತುಷ್ಟಯಂ
ಏತೈರಾದಿತ್ಯಮಂಡಲಂ
ಸರ್ವೈರೇವ ವಿಧಾಸ್ಯತೇ
ಇಲ್ಲಿನ ಸ್ಮೃತಿ, ಪ್ರತ್ಯಕ್ಷ, ಐತಿಹ್ಯ, ಅನುಮಾನವೆಂಬ ನಾಲ್ಕು ಪ್ರಮಾಣಗಳಲ್ಲಿನ ಐತಿಹ್ಯವೆಂಬ ಪ್ರಮಾಣವನ್ನು ಪೌರಾಣಿಕರು ಅಂಗೀಕರಿಸಿದ್ದಾರೆಯೇ ಹೊರತು ಮೀಮಾಂಸಕರಲ್ಲ. ಆದುದರಿಂದ ಇತಿವೃತ್ತಗಳ ರೂಪದ ಬೋಧನೆಯನ್ನು ವೇದವಂಗೀಕರಿಸಿರುತ್ತೆ. ಇವೇ ಪುರಾಣಗಳು ಕಾಲಾಂತರದಲ್ಲಿ ಇವುಗಳಲ್ಲಿ ಕಲ್ಪನಾ ಕಥೆಗಳ ಅಂಶ ಹೆಚ್ಚಾಗುತ್ತ ಬಂದಿದೆ.
ಪ್ರಶ್ನೆ:- ಸ್ವಾಮಿವಿವೇಕಾನಂದರವರು ಹೀಗೆ ಹೇಳುತ್ತಾರೆ:-
ಪುರಾಣಗಳಲ್ಲಿರುವ ಯಾವುದೇ ವಿಷಯವು ವೇದ ಸಮ್ಮತ ಅಲ್ಲದಿದ್ದರೆ ಅದನ್ನು ಒಪ್ಪಬೇಕಾಗಿಲ್ಲ.
I want the orthodoxy of the Vedic times and not the present. ಈ ಅಂಶವನ್ನು ಗಮನಿಸಿ ತಾವು ತಿಳಿಸಬೇಕಾಗಿ ಕೋರುತ್ತೇನೆ.
ಉತ್ತರ:- ಈಗ ನಮಗೆ ಲಭ್ಯವಿರುವ ವೇದಗಳೆಲ್ಲಾ ಎಲ್ಲೋ ಒಂದುಕಡೆ ಅಡಗಿದ್ದು ಸೃಷ್ಟಿಯ ಆದಿಯಲ್ಲಿ ಬ್ರಹ್ಮದೇವನಿಗೆ ಗೋಚರವಾಯಿತು. ಇವು ಅಪೌರುಷೇಯಗಳು ಅಂದರೆ ಮನುಷ್ಯನ ಬರಹಗಳಲ್ಲ ಎಂದು ಹೇಳುವುದುಂಟು. ಆದರೆ ನಾನು ಇದನ್ನು ಚಾರಿತ್ರಿಕ ಸತ್ಯವೆಂದು ಒಪ್ಪಲಾರೆ. ವೇದಗಳು ಸಹ ಅತಿ ಪ್ರಾಚೀನವಾದರೂ ಕಾಲದಿಂದ ಕಾಲಕ್ಕೆ ಮಹರ್ಷಿಗಳಿಂದ ರಚಿಸಲ್ಪಟ್ಟಿವೆ ಎಂದು ನನ್ನ ಅಭಿಪ್ರಾಯ. ಕೆಲವು ಮಂತ್ರಗಳು ಅಲೌಕಿಕ ದೃಷ್ಟಿಗೆ ಗೋಚರವಾಗಿರಬಹುದು. ಪೌರುಷೇಯವೆಂದರೆ ಮನುಷ್ಯನ ಕಲ್ಪನೆಯಿಂದ ರಚಿತವಾದುದು. ಅಪೌರುಷೇಯವೆಂದರೆ ವಾಸ್ತವಿಕ ಸ್ಥಿತಿಯನ್ನು ತಿಳಿಸುವುದು. ವೇದಗಳು ಹೆಚ್ಚಾಗಿ ವಾಸ್ತವಿಕ ಸ್ಥಿತಿಯನ್ನು ತಿಳಿಸುವ ಗ್ರಂಥಗಳಾದುದರಿಂದ ಅಪೌರುಷೇಯಗಳು. ಪುರಾಣಗಳು ಕಲ್ಪನಾ ಪ್ರಧಾನವಾದವು. ಆದರೆ ಎರಡರ ಸಂದೇಶವೂ ಒಂದೇ. ಈ ಎರಡರಲ್ಲಿ ಎಲ್ಲಿಯಾದರೂ ಪರಸ್ಪರ ವಿರುದ್ಧವಾದ ಸಂಗತಿಗಳು ಬಂದರೆ ವೇದಕ್ಕೇ ಪ್ರಾಮಾಣ್ಯವು ಹೆಚ್ಚು ಎಂಬುದೇ ಪರಂಪರಾಗತವಾದ ಅಭಿಪ್ರಾಯ. ಇದನ್ನೇ ಸ್ವಾಮಿ ವಿವೇಕಾನಂದರೂ ಇಂದಿಗೆ ತಕ್ಕಂತೆ ಹೇಳಿರುತ್ತಾರೆ. ಆದರೆ ಇದು ಮೂಲತತ್ವಗಳಿಗೂ ಸಿದ್ಧಾಂತಗಳಿಗೂ ಅನ್ವಯಿಸುವ ಮಾತು. ಪ್ರಪಂಚದಲ್ಲಿನ ಎಲ್ಲ ಕಾಲಗಳ ಎಲ್ಲ ದೇಶಗಳ, ವಾಸ್ತವಿಕತೆಯನ್ನು ತಿಳಿಸುವ ಸಾಹಿತ್ಯವೆಲ್ಲಾ ವೇದವೆಂದೇ ನನ್ನ ಅಭಿಪ್ರಾಯ. ಇಂದಿನ ವಿಜ್ಞಾನ ನನಗೆ ಪರಮ ವೇದ. ಪ್ರಪಂಚದ ಇತರ ಸಾಹಿತ್ಯ(ಪೌರುಷೇಯ)ವೆಲ್ಲವನ್ನೂ ಗಮನಿಸುವಾಗ ನಾವು ಯಾವ ವಿಷಯವನ್ನು ಯಾವ ಕಾಲದಲ್ಲಿ ಯಾವ ಸಂದರ್ಭದಲ್ಲಿ ಏಕೆ ಹೇಳಿದ್ದಾರೆ ಎಂಬುದನ್ನು ಅರ್ಥಮಾಡಿಕೊಂಡು ಮೂಲ ಸಿದ್ಧಾಂತಗಳನ್ನು ಅರಿತು ಅವುಗಳನ್ನು ಇಂದಿನ ಪರಿಸ್ಥಿತಿಗಳಿಗೆ ಹೇಗೆ ಅನ್ವಯಿಸಬೇಕೆಂದು ಆಲೋಚಿಸಿ ಧರ್ಮನಿರ್ಣಯ ಮಾಡಬೇಕೆಂಬುದು ನನ್ನ ಅಭಿಪ್ರಾಯ.
ಪ್ರಶ್ನೆ:- ಫೆಬ್ರವರಿ ಸಂಚಿಕೆಯಲ್ಲಿ ಬ್ರಹ್ಮತತ್ವವು ಸಾಕಾರವೂ ನಿರಾಕಾರವೂ ಆಗಿದೆಯೆಂಬ ವೇದಾಂತ ಸಾರಭೂತವಾದ ಸತ್ಯವನ್ನು ಗಮನಿಸಿದರೆ ಮೇಲ್ಕಂಡ ವಿವಾದವು ಪರಿಹಾರವಾಗುತ್ತದೆ ಎಂಬುದಾಗಿ ತಿಳಿಸಿದ್ದೀರಿ.
ಯಾವ ಉಪನಿಷತ್ತುಗಳಲ್ಲಿ ಬ್ರಹ್ಮತತ್ವ ರುದ್ರತತ್ವಗಳ ಸಾಕಾರ ವರ್ಣನೆ ಮಾಡಿದ್ದಾರೆ?
ಉತ್ತರ:- ಬ್ರಹ್ಮತತ್ವವು ಸಾಕಾರವೂ ನಿರಾಕಾರವೂ ಎಂದು ನಾನು ಹೇಳಿದ್ದು ತ್ರಿಮೂರ್ತಿಗಳಲ್ಲಿನ ಬ್ರಹ್ಮ ರುದ್ರರಿಗೆ ಸಂಬಂಧಿಸಿದಾಗಿ ಅಲ್ಲ. ಪರಬ್ರಹ್ಮ ತತ್ವಕ್ಕೆ ಸಂಬಂಧಿಸಿದ ಹಾಗೆ ನಾನು ಬರೆದಿದ್ದು. ಅದರ ಮುಂದಿನ ವಿವರಣೆ ಇದನ್ನು ಸ್ಪಷ್ಟಮಾಡಿದೆ. ಆದುದರಿಂದ ಮೇಲ್ಕಂಡ ಪ್ರಶ್ನೆಗೆ ಅವಕಾಶವೇ ಇಲ್ಲ.
ಪ್ರಶ್ನೆ:- ಪುರಾಣಗಳಲ್ಲಿ ಉಕ್ತವಾಗಿರುವ ಸಾಕಾರಮೂರ್ತಿಗಳು ಉಪನಿಷತ್ತುಗಳಲ್ಲಿ ಉಕ್ತವಾಗಿರುವ ನಿರಾಕಾರ ಬ್ರಹ್ಮ ಮತ್ತು ರುದ್ರತತ್ವಕ್ಕೆ ವಿರೋಧವಲ್ಲವೇ?
ಉತ್ತರ:-ಒಂದೇ ಬ್ರಹ್ಮ ತತ್ವವು ಸಾಕಾರವೂ ನಿರಾಕಾರವೂ ಆಗಿದೆ ಎಂಬ ವೇದಾಂತದ ಸಾರಭೂತವಾದ ಸತ್ಯವನ್ನು ಗಮನಿಸಿದರೆ ಮೇಲ್ಕಂಡ ವಿರೋಧವು ಪರಿಹಾರವಾಗುತ್ತದೆ. ಪಂಚೇಂದ್ರಿಯ ಗೋಚರವಾದ ಬಾಹ್ಯ ಪ್ರಪಂಚವೆಲ್ಲವೂ ಒಂದೇ ಸಾಕಾರ ಬ್ರಹ್ಮದ ಸ್ವರೂಪವು ತಾನೆ. ಈ ಬಾಹ್ಯ ಪ್ರಪಂಚದಲ್ಲಿನ ಭಿನ್ನತ್ವದಲ್ಲಿ ಏಕತ್ವವನ್ನು ವಿಜ್ಞಾನವು ಸಹ ಅಂಗೀಕರಿಸುತ್ತಿದೆ ಅಲ್ಲವೇ. ಸಮಸ್ತ ಬಾಹ್ಯ ಪ್ರಪಂಚವೂ 92 ಮೂಲ ಪದಾರ್ಥಗಳಿಂದ ಕೂಡಿದೆ ಎಂಬ ವಾದವು ಹೋಗಿ ಈಗ ಇದೆಲ್ಲವೂ ಒಂದೇ ಶಕ್ತಿಯ ಭಿನ್ನ ಭಿನ್ನ ಸ್ವರೂಪವೆಂದು ವಿಜ್ಞಾನವಂಗೀಕರಿಸಿದೆ. ಆದುದರಿಂದ ಈ ವಿಶ್ವದಲ್ಲಿ ಏಕತ್ವವೂ ಸತ್ಯ. ಭಿನ್ನತ್ವವೂ ಸತ್ಯ. ಮಾನವನು ಈ ಬಾಹ್ಯ ಪ್ರಪಂಚವನ್ನು ಪಂಚೇಂದ್ರಿಯಗಳ ಮೂಲಕ ಅನುಭವಿಸುವಾಗ ಅನುಭವಿಸಲ್ಪಟ್ಟ ವಿಷಯಗಳು ಆತನ ಮನಸ್ಸಿನಲ್ಲಿ ಅನುಭವದ ಕಾಲಾನಂತರವೂ ನಿಲ್ಲುತ್ತಿದೆ ಅಲ್ಲವೇ? ಪುನಃ ನೆನಪಿಗೆ ಬರುತ್ತದೆ ಅಲ್ಲವೇ? ಒಳಗಡೆ ಇದ್ದರೂ ಅವನ ಅಭಿಪ್ರಾಯಗಳ ಮೇಲೆ ಪ್ರಭಾವವನ್ನು ಬೀರುತ್ತಿರುತ್ತದೆ ಅಲ್ಲವೇ. ಹೀಗೆ ಚಿತ್ತವೆಂಬ ಅಂತಃಕರಣದಲ್ಲಿರುವ ಈ ಬಾಹ್ಯ ಪ್ರಪಂಚದ ವೈವಿಧ್ಯಮಯ ಅನುಭವಗಳು ಯಾವ ಸ್ವರೂಪದಲ್ಲಿವೆ ಎಂಬುದು ಯಾರಿಗೂ ತಿಳಿಯದು. ವಿಜ್ಞಾನಿಗಳಿಗೂ ಗೊತ್ತಿಲ್ಲ. ಇವು ನಿರಾಕಾರವೆಂದೇ ಭಾವಿಸಬೇಕಾಗಿದೆ. ಆದುದರಿಂದ ಸ್ಥೂಲದಲ್ಲಿ ಸಾಕಾರವಾಗಿರುವುದೇ ಸೂಕ್ಷ್ಮದಲ್ಲಿ ನಿರಾಕಾರವಾಗಿದೆ. ಆದರೆ ಎರಡೂ ಒಂದೇ. ಸ್ಥೂಲ ಸ್ಥಿತಿಯಿಂದ ಸೂಕ್ಷ್ಮ ಸ್ಥಿತಿಗೂ, ಸೂಕ್ಷ್ಮ ಸ್ಥಿತಿಯಿಂದ ಸ್ಥೂಲ ಸ್ಥಿತಿಗೂ ಪರಿವರ್ತನೆ ಆಗುತ್ತಲೇ ಇರುತ್ತದೆ.
ಆದುದರಿಂದ ಒಂದೇ ಆದ ಸೂಕ್ಷ್ಮಾತಿ ಸೂಕ್ಷ್ಮವಾದ, ಮತ್ತು ಮಾನವನ ಊಹೆಗೂ ಅತೀತವಾದ ಪರಬ್ರಹ್ಮನೆನಿಸುವುದೇ ಅತ್ಯಂತ ಸ್ಥೂಲವಾಗಿ ದೇಶಕಾಲಗಳಲ್ಲಿ ವ್ಯಾಪ್ತವಾಗಿ ಇಂದ್ರಿಯ ಗೋಚರವಾಗಿರುವ ವೈವಿಧ್ಯಪೂರ್ಣ ವಿಶ್ವವೂ ಆಗಿದೆ. ಇದೇ ಪರಮ ಸತ್ಯ. ಆದರೇ ಮನಸ್ಸಿನ ವ್ಯಾಪಾರವಾಧಾರವಾಗಿರುವ ವ್ಯವಹಾರಗಳಲ್ಲಿ ವ್ಯಾವಹಾರಿಕ ಸತ್ಯಗಳು ಆಯಾ ಸಂದರ್ಭಗಳನ್ನನುಸರಿಸಿ ಭಿನ್ನ ಭಿನ್ನವಾಗಿರುತ್ತವೆ. ಈ ವ್ಯಾವಹಾರಿಕ ಸತ್ಯಗಳಲ್ಲಿ ಮನಃ ಕಲ್ಪಿತವಾದವುಗಳೂ ಸೇರಿವೆ. – 1 ಎಂಬುದಕ್ಕೆ ವರ್ಗಮೂಲ (Square root) ಇಲ್ಲ. ಆದರೆ ಈ ವರ್ಗ ಮೂಲವನ್ನು ಕಲ್ಪಿತವಾಗಿಟ್ಟುಕೊಂಡು ಇದಕ್ಕೆ i ಎಂಬ ಹೆಸರನ್ನು ಕೊಟ್ಟು ನಾವು ಗಣಿತ ಶಾಸ್ತ್ರದಲ್ಲಿ ಉಪಯೋಗಿಸುತ್ತಿಲ್ಲವೇ. ಹಾಗಾದರೆ ಇದು ನಿಜವಾಗಿ ಇದ್ದಂತಾಯಿತೇ ಅಥವಾ ಇಲ್ಲದಂತಾಯಿತೇ?ಎಂಬ ಪ್ರಶ್ನೆಗೆ ಉತ್ತರವಿಲ್ಲ. ಹಾಗೆಯೇ ಮನಃ ಕಲ್ಪಿತವು ಸಹ “ಪ್ರಾತಿಭಾಸಿಕ ಸತ್ಯ”ವೆಂದು ಕರೆಯಲ್ಪಡುತ್ತಿದೆ.
ಇದಲ್ಲದೆ ಇನ್ನೊಂದು ಮುಖ್ಯವಾದ ವಿಷಯವನ್ನು ನಾವು ಗಮನಿಸಬೇಕಾಗಿದೆ. ಒಂದು ಬಾವಿಯಲ್ಲಿರುವ ಕಪ್ಪೆಯ ಪ್ರಪಂಚ ಅದರ ಪರಿಶೀಲನಾ ಶಕ್ತಿಗೂ, ಅದಕ್ಕೆ ದೊರೆಯುವ ಅನುಭವದ ಪ್ರಪಂಚಕ್ಕೂ ಸೀಮಿತವಾಗಿರುತ್ತದೆ್ ಹಾಗೆಂದು ಇನ್ನೂ ಉತ್ತಮ ತಪಸ್ವಿಗಳಾದವರ ಪ್ರಪಂಚವು ಸಹ ನಮ್ಮ ಪ್ರಪಂಚದಷ್ಟೇ ಎಂದು ಹೇಳುವುದು ತಪ್ಪು. ಆದುದರಿಂದ ಈ ವಿಶ್ವದಲ್ಲೇ ಅನೇಕ ಲೋಕಗಳು(ನೋಟಗಳು) ಅಂತರ್ಭೂತವಾಗಿವೆ. ಇವುಗಳನ್ನು ಕಾಣುವ ಶಕ್ತಿ ಇರುವವರಿಗೆ ಇವು ಕಾಣುತ್ತವೆ. ಅಲ್ಲಿನ ಅನುಭವಗಳೇ ಬೇರೆಯಾಗಿರುವ ಅವಕಾಶವಿದೆ. ಮಹರ್ಷಿಗಳು ಇಂತಹ ಲೋಕಾಂತರ ದೃಷ್ಟಿ ಉಳ್ಳವರು. ಅವರು ವೇದಗಳಲ್ಲಿ ಅವರಿಗೆ ಗೋಚರವಾದ ಪರಮ ಸತ್ಯವನ್ನುಒಂದು ರೀತಿ ಹೇಳಿದರೆ ಪುರಾಣಗಳಲ್ಲಿ ಭಿನ್ನತ್ವದಿಂದ ಕೂಡಿದ ಸತ್ಯವನ್ನು ಇನ್ನೊಂದು ಹಂತದಲ್ಲಿ ಇನ್ನೊಂದು ರೀತಿಯಲ್ಲಿ ವರ್ಣಿಸುತ್ತಾರೆ. ಈ ಪುರಾಣ ಸತ್ಯಗಳು ಕವಿಗಳ ಕಲ್ಪನೆಗೆ ಒಳಗಾದ ಮೇಲೆ ಅವುಗಳ ಸ್ವರೂಪ ಇನ್ನೊಂದಾಗಿ ಬಿಡುವುದು ಸಹಜ. ಪಾಮರ ಜನರಿಗೆ ಬೋಧನೆ ಮಾಡುವಾಗ ಇದು ಬಹಳ ಉಪಯೋಗಕರ. ಪಂಡಿತರು ಇದರ ಮೂಲ ತತ್ವದಿಂದ ಬೆಳಕನ್ನು ಪಡೆದು ಕಾಲ್ಪನಿಕತೆಯಿಂದ ವಿನೋದವನ್ನು ಪಡೆಯಬೇಕಾಗಿದೆ. ಅಲ್ಲದೆ ಪುರಾಣಗಳಲ್ಲಿನ ಇನ್ನೊಂದು ದೊಡ್ಡ ವಿಶೇಷವೆಂದರೆ ಬೇರೆ ಬೇರೆಯ ರೂಪಗಳಲ್ಲಿ ದೇವರ ಉಪಾಸನೆ ಮಾಡುತ್ತಿದ್ದ ಭಿನ್ನ ಭಿನ್ನ ಮತದವರನ್ನು ಒಟ್ಟಿಗೆ ಸೇರಿಸಿರುವುದು. ಉದಾಹರಣೆಗೆ, ಶೈವ, ಶಾಕ್ತ, ಗಾಣಪತ್ಯ ಮತದವರಲ್ಲಿ ಸಾಮರಸ್ಯವನ್ನು ಸಾಧಿಸಲು ಶಿವನಿಗೆ ಶಕ್ತಿಯನ್ನು ಹೆಂಡತಿಯನ್ನಾಗಿಸಿ ಗಣಪತಿಯನ್ನು ಮಗನನ್ನಾಗಿಸಿರುವುದನ್ನು ತೆಗೆದುಕೊಳ್ಳಬಹುದು. ಆದುದರಿಂದ ವೈದಿಕ ತತ್ವಗಳಿಗೂ ಪೌರಾಣಿಕ ತ್ರಿಮೂರ್ತಿಗಳ ತತ್ವಗಳಿಗೂ ವಿರೋಧವಿಲ್ಲವೆಂದು ನನ್ನ ಅಭಿಪ್ರಾಯ.