ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 20
ಅತ್ಯುತ್ತಮ ಧರ್ಮ
(ದಿನಾಂಕ 1 – 2- 1996 ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನ)
ಇಂದು ವಿಜ್ಞಾನವು ಬಹಳ ಬೆಳೆದಿದ್ದರೂ ಅದೇ ರೀತಿಯಾಗಿ ಧರ್ಮಜ್ಞಾನವು ಬೆಳೆದಿಲ್ಲ. ಧರ್ಮವೆಂದರೆ ಮತವೆಂಬ ತಪ್ಪು ಕಲ್ಪನೆ ಜನರಲ್ಲಿ ಉಂಟಾಗಿ, ಹಿಂದೂ ಧರ್ಮ, ಕ್ರಿಸ್ತ ಧರ್ಮ, ಇಸ್ಲಾಂ ಧರ್ಮ ಇತ್ಯಾದಿ ಹೆಸರುಗಳು ರೂಢಿಗೆ ಬಂದಿವೆ. “ಧಾರಣಾತ್ ಧರ್ಮಃ” ಎಂಬುದು ಧರ್ಮ ಶಬ್ದದ ವ್ಯುತ್ಪತ್ತಿ. ಎಂದರೆ ಸಕಲ ಪ್ರಾಣಿಗಳನ್ನೂ ಒಂದು ಸಮತೋಲನದಲ್ಲಿ ಧರಿಸಿ ಅವುಗಳ ಜೀವನಕ್ಕೆ ಮತ್ತು ಮನಶ್ಯಾಂತಿಗೆ ಸಾಧ್ಯವಾದಷ್ಟು ಸಹಾಯ ಮಾಡುವುದೇ ಧರ್ಮ. ಸಮಸ್ತ ಪ್ರಾಣಿಗಳನ್ನೂ ಸೃಷ್ಟಿಸಿರುವ ಪರಮಾತ್ಮನು ಪ್ರಕೃತಿ ನಿಯಮಗಳನ್ನು ಎಲ್ಲ ಪ್ರಾಣಿಗಳ ಉಳಿವಿಗಾಗಿಯೂ ಸಂತೋಷಕ್ಕಾಗಿಯೂ ಇಟ್ಟಿದ್ದಾನೆ. ಆದುದರಿಂದ ಸಕಲ ಪ್ರಾಣಿಗಳ ಹಿತಕ್ಕಾಗಿರುವುದೇ ಧರ್ಮ.
ಇಂದು ನಮ್ಮ ದೇಶದಲ್ಲಿ ಹೊಟ್ಟೆಗಿಲ್ಲದೆ ಬಟ್ಟೆಗಿಲ್ಲದೆ ನರಳುತ್ತಿರುವ ವಿಷಯವಾಗಿ ಧರ್ಮದೃಷ್ಟಿಯಿಂದ ಪ್ರಭುತ್ವವು ಮಾಡಬೇಕಾದಷ್ಟು ಕೆಲಸವನ್ನು ಮಾಡುತ್ತಿಲ್ಲ. ಜನರೂ ಮಾಡುತ್ತಿಲ್ಲ. ವಿದ್ಯಾವಂತರೂ, ಮತ್ತು ಗುರುಗಳೂ ಮುಂತಾದವರು ಸಹ ಮಾಡಬೇಕಾದಷ್ಟು ಕೆಲಸ ಮಾಡುತ್ತಿಲ್ಲ. ಧರ್ಮದ ವಿಷಯವಾಗಿ ಚರ್ಚೆಗಳು ನಡೆಯುತ್ತಿದ್ದರೂ ಧರ್ಮದ ಮೂಲಭೂತವಾದ ಉದ್ದೇಶವನ್ನು ಗಮನಿಸಿ ಧರ್ಮವನ್ನು ಬೆಳೆಸುವ ಪ್ರಯತ್ನ ಅತ್ಯಲ್ಪವಾಗಿದೆ.
ಧರ್ಮದ ಸಾರಾಂಶವನ್ನು ವೇದವ್ಯಾಸರ ಕೆಳಕಂಡ ಶ್ಲೋಕವು ಬೋಧಿಸುತ್ತಿದೆ:
ಶ್ಲೋಕಾರ್ಥೇ ನಪ್ರವಕ್ಷ್ಯಾಮಿ
ಯಮಕ್ತಂ ಗ್ರಂಥಕೋಟಿಭಿಃ I
ಪರೋಪಕಾರಃ ಪುಣ್ಯಾಯ
ಪಾಪಾಯ ಪರ ಪೀಡನಂ II
(ಕೋಟಿ ಗ್ರಂಥಗಳಲ್ಲಿ ಹೇಳಿರುವ ಧರ್ಮದ ಸಾರಾಂಶವನ್ನು ಅರ್ಧ ಶ್ಲೋಕದಲ್ಲಿ ಹೇಳುತ್ತಿದ್ದೇನೆ ಕೇಳಿ. ಪರೋಪಕಾರವು ಪುಣ್ಯಕ್ಕಾಗಿ ಮತ್ತು ಪರಪೀಡನವು ಪಾಪಕ್ಕಾಗಿ ಇದೆ.)
ಈ ಮಾತನ್ನು ಎಲ್ಲರೂ ಸದಾ ನೆನೆಸುತ್ತ ಆದಷ್ಟು ಪರೋಪಕಾರದಲ್ಲಿ ತೊಡಗಲಿ. ಆಗ ಮಾನವ ಸಮಾಜದಲ್ಲಿ ಸಂತೋಷವು ತಾಂಡವವಾಡುತ್ತದೆ.
- ಲಂಕಾ ಕೃಷ್ಣಮೂರ್ತಿ