]
(ದಿ. 1-7-1991 ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ಒದುಗರಪತ್ರಗಳಿಗೆ ದಿ.ಲಂಕಾ ಕೃಷ್ಣಮೂರ್ತಿಯವರು ಕೊಟ್ಟ ಉತ್ತರದ ಲೇಖನ)
ಪ್ರಶ್ನೆ:- ಇತ್ತೀಚೆಗೆ ಕೆಲವು ಮಠಾಧಿಪತಿಗಳಾದ ಸ್ವಾಮಿಗಳು ತಮ್ಮ ವರ್ಧಂತಿಗಳನ್ನು ಆಚರಿಸಿಕೊಳ್ಳುವುದಲ್ಲದೆ ಪಟ್ಟಕ್ಕೇರಿದ ಸವಿನೆನಪಿಗಾಗಿ ರಜತ ಮಹೋತ್ಸವ, ಇತ್ಯಾದಿಗಳನ್ನು ಆಚರಿಸಿಕೊಂಡು ತತ್ಸಂಬಂಧವಾಗಿ ಭಕ್ತಾದಿಗಳಿಂದ ಹಣ ವಸೂಲಿ ಮಾಡುವುದು ನ್ಯಾಯವೇ? ಒಂದು ವೇಳೆ ಭಕ್ತಾದಿಗಳು ಸ್ವಯಪ್ರೇರಿತರಾಗಿ ಕೊಟ್ಟರೂ, ಆಧ್ಯಾತ್ಮಿಕ ಪ್ರಚಾರಕ್ಕಾಗಿ, ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಉಪಯೋಗಿಸಬೇಕಾದ ಹಣವನ್ನು ತಮ್ಮ ವರ್ಧಂತಿ ಇತ್ಯಾದಿಗಳಿಗೆ ಉಪಯೋಗಿಸಿ ರಾಜಕೀಯ ಧುರೀಣರನ್ನು ಆಹ್ವಾನಿಸಿ ಅವರಿಗೆ ಬಹುಪರಾಕು ಹೇಳಿ ಅವರಿಂದ ಹಾರ ತುರಾಯಿ ಶಾಲು ಇತ್ಯಾದಿಗಳನ್ನು ಸ್ವೀಕರಿಸಿ ಮನಃಶಾಂತಿ ಪಡೆಯುವುದು ಸನ್ಯಾಸಿಗಳಿಗೆ ಯೋಗ್ಯವೇ? ಈ ಬಗ್ಗೆ ಧರ್ಮ ಏನು ಹೇಳುತ್ತದೆ ಎಂಬುದನ್ನು ತಿಳಿಸಬೇಕಾಗಿ ಪ್ರಾರ್ಥನೆ.
ಉತ್ತರ:- ಉತ್ಸವಗಳಲ್ಲಿ ಅನೇಕ ಜನ ಸೇರುತ್ತಾರೆ. ಸಂತೋಷವಾಗಿ ಕಾಲಕಳೆಯುತ್ತಾರೆ. ಎಲ್ಲರಿಗೂ ಪೂಜ್ಯಭಾವನೆಯಿರುವ ಒಬ್ಬ ದೇವರನ್ನಾಗಲಿ ಮಹಾಪುರುಷರನ್ನಾಗಲಿ ಸ್ಮರಿಸಿಕೊಂಡು ಅದರ ಮೂಲಕ ಸಂಸ್ಕೃತಿಯನ್ನು ಬೆಳಸುತ್ತಾರೆ. ಆದುದರಿಂದ ಉತ್ಸವಗಳು ಒಳ್ಳೆಯವೇ. ಆದರೆ ಇದಕ್ಕೆ ಬೇಕಾದ ಹಣವನ್ನು ಯಾವ ಒತ್ತಾಯವಿಲ್ಲದೆ, ಯಾವ ಅಧರ್ಮ ಮಾರ್ಗವನ್ನು ಹಿಡಿಯದೆ, ಅಧರ್ಮಿಗಳಿಂದ ಗ್ರಹಿಸದೆ,ಕೇವಲ ಪ್ರೀತಿಯಿಂದ ಕೊಡುವವರಿಂದ ಮಾತ್ರ ಗ್ರ್ಹಿಸಿ ಉತ್ಸವಗಳನ್ನು ಮಾಡಿ ಹತ್ತು ಜನರನ್ನು ಒಂದು ಕಡೆ ಸೇರಿಸಿ ಒಳ್ಳೆಯ ವಿಚಾರಗಳತ್ತ ಗಮನ ಹರಿಸಿ ಆನಂದಿಸುವುದು ಒಳ್ಳೆಯ ಸಂಪ್ರದಾಯವೇ.
ಪ್ರಶ್ನೆಯಲ್ಲಿ ನಮೂದಿಸಿರುವ ಉತ್ಸವಗಳನ್ನು ನಡೆಸುವುದೇ ತಪ್ಪಲ್ಲ. ಮಠಾಧಿಪತಿಗಳು ನಿಜವಾದ ಜ್ಞಾನಿಗಳಾಗಿ ಧರ್ಮಾಚರಣೆ ಉಳ್ಳವರಾಗಿ, ತ್ಯಾಗಿಗಳಾಗಿದ್ದರೆ ಭಕ್ತಾದಿಗಳೇ ಪ್ರೀತಿಯಿಂದ ಇಂತಹ ಉತ್ಸವಗಳನ್ನು ಏರ್ಪಡಿಸಿದರೆ ಅವರ ತಪ್ಪೇನಿಲ್ಲ. ಆದರೆ ಇವುಗಳಿಗೆ ಮಠಾಧಿಪತಿಗಳೇ ಆಸೆಪಟ್ಟರೆ ಇವುಗಳಿಂದ ಸಂತೋಷಪಟ್ಟರೆ ಅಥವಾ ತಮ್ಮ ಹೆಸರಿಗಾಗಿ ಅವರು ಈ ಕೆಲಸಗಳನ್ನು ಮಾಡಿಸಿದರೆ ನಿಸ್ಸಂಶಯವಾಗಿ ಅದು ತಪ್ಪು. ಅದರಲ್ಲಿ ರಾಜಕೀಯ ಧುರೀಣರನ್ನು ಕರೆಸಿ ಮಂದಬುದ್ಧಿಗಳಾದ ಜನರಲ್ಲಿ ತಮ್ಮ ಹೆಸರನ್ನೂ ಪ್ರಭಾವವನ್ನೂ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವುದು ಸಹ ಬಹಳ ತಪ್ಪು.
ಮೇಲ್ಕಂಡ ಅಭಿಪ್ರಾಯಕ್ಕೆ ಕಾರಣಗಳು ಹೀಗಿವೆ. ಒಂದು ಗುಂಪಿನ ನಾಯಕನಾಗಿ ಹೆಸರು ಪಡೆದು ಗುಂಪಿನ ಹಿತಕ್ಕೆ ಶ್ರಮಿಸುವುದು ಸಮಾಜ ಹಿತಕ್ಕೆ ಒಳ್ಳೆಯದೇ ಆದರೂ ನಿಜವಾದ ಸನ್ಯಾಸಿಗಳಿಂದ ಸಮಾಜಕ್ಕಾಗುವ ದೊಡ್ಡಹಿತ ಇಂತಹವರಿಂದ ಆಗುವುದಿಲ್ಲ. ಪ್ರಾಪಂಚಿಕವಾದ ಸುಖದ ಸಾಧನೆಗಿಂತಲೂ ಆಧ್ಯಾತ್ಮಿಕ ಸುಖ ಸಾಧನೆ ಅತಿ ಶ್ರೇಷ್ಠವಾದುದು. ನಿಜವಾದ ಸನ್ಯಾಸಿಗಳಿಂದ ಮಾತ್ರ ಆಧ್ಯಾತ್ಮಿಕ ಜ್ಞಾನವು ಜನರಲ್ಲಿ ಪ್ರಚಾರವಾಗುತ್ತದೆಯೇ ಹೊರತು ಕೇವಲ ವಿದ್ವಾಂಸರಾದವರಿಂದ ಇದು ಸಾಧ್ಯವಿಲ್ಲ. ಕೇವಲ ವಿದ್ವಾಂಸನಾಗಿ, ವಾಕ್ಪಟುತ್ವದಿಂದ ಜನರನ್ನು ಬೆರಗುಮಾಡುತ್ತ ತಾನು ನಿಜವಾದ ಸನ್ಯಾಸಿ ಆಗದಿರುವ ಮಠಾಧಿಪತಿಯು ಗುಂಪಿನ ನಾಯಕನಾಗಿ ಸಾಧಿಸುವ ಗುಂಪಿನ ಹಿತ ಪ್ರಾಪಂಚಿಕವಾಗಿರುವುದು ಮತ್ತು ಅಹಂಕಾರ ಮಮಕಾರಗಳನ್ನು ಬೆಳಸುವುದರಿಂದ ಶಾಶ್ವತವಲ್ಲ. ಇದರಲ್ಲಿ ಇತರ ಗುಂಪಿಗಳೊಂದಿಗೆ ಸ್ಪರ್ಧೆಯು ಅಪಾಯವೂ ಇದೆ. ಅಲ್ಲದೆ ಧರ್ಮಿಷ್ಠರಲ್ಲದ ಬಲಿಷ್ಠರ ಪ್ರಭಾವ ಇದರಿಂದ ಹೆಚ್ಚಾಗಿ ಶಕ್ತಿಹೀನರಾದ ಧರ್ಮಿಸ್ಠರಿಗೆ ಕೇಡಾಗುವ ಅಪಾಯವೂ ಇದೆ.
ಮಠಾಧಿಪತಿಗಳು ನಿಜವಾದ ಸಂನ್ಯಾಸ ಧರ್ಮವನ್ನು ಅನುಸರಿಸುವರಾದರೆ ಅವರಿಂದ ಜನರಿಗೆ ಬರುವ ತ್ಯಾಗದ ಸ್ಫೂರ್ತಿ ಶಾಶ್ವತವಾದ ಪ್ರಯೋಜನವನ್ನು ಕೊಡುತ್ತದೆ. ಸನ್ಯಾಸಿ ಧರ್ಮಗಳನ್ನು ಪರಿಪಾಲಿಸುವ ಮಠಾಧಿಪತಿ ಎಂದಿಗೂ ತನ್ನ ಹೆಸರಿನ ಮೇಲೆ ಉತ್ಸವಗಳಿಗೆ ಆಶಿಸುವುದಿಲ್ಲ, ಒಪ್ಪುವುದೂ ಇಲ್ಲ.
ಸಮಾಜಕ್ಕೆ ತಮ್ಮದೇ ಆದ ಜ್ಞಾನ ಮತ್ತು ಸಂಸ್ಕೃತಿಗಳ ಮಹಾ ಲಾಭವನ್ನು ಕೊಡುವ ಸನ್ಯಾಸಿಗಳ ಮತ್ತು ಸದ್ಬ್ರಾಹ್ಮಣರ(ಕೇವಲ ಜಾತಿಯ ಬ್ರಾಹ್ಮಣರಲ್ಲ) ಧರ್ಮದ ವಿಷಯವಾಗಿ ಮನುಸ್ಮೃತಿಯ ಕೆಳಗಿನ ಶ್ಲೋಕಗಳು ಪ್ರತಿಯೊಬ್ಬ ಮಾನವನೂ ಗಮನಿಸಬೇಕಾದವು.
ಸಮ್ಮಾನಾದ್ಬ್ರಾಹ್ಮಣೋ ನಿತ್ಯಂ
ಉದ್ವೀಜೇತ ವಿಷಾದಿವ I
ಅಮೃತಸ್ಯೇವ ಚಾಕಾಂಕ್ಷೇ
ದವಮಾನಸ್ಯ ಸರ್ವದಾ II
ಬ್ರಾಹ್ಮಣನು ಸಮ್ಮಾನವನ್ನು ವಿಷದಂತೆ ಭಾವಿಸಬೇಕು. ಅವಮಾನವನ್ನು ಅಮೃತದಂತೆ ಸ್ವೀಕರಿಸಬೇಕು ಎಂಬ ಈ ಶ್ಲೋಕದ ಭಾವವು ಮಹಾತ್ಮನಾದ ಕ್ರಿಸ್ತನು ಹೇಳಿರುವ “ನಿನ್ನ ಬಲಕೆನ್ನೆಗೆ ಹೊಡೆದರೆ, ಎಡಕೆನ್ನೆಯನ್ನು ತೋರಿಸು” ಎಂಬ ಮಹಾವಾಕ್ಯದ ಭಾವವನ್ನೇ ಹೇಳುತ್ತಿದೆ.
ದಶಸೂನಾ ಸಹಸ್ರಾಣಿ ಯೋವಾಹಯತಿ ಸೌನಿಕಃ I
ತೇನ ತುಲ್ಯಃ ಸ್ಮೃತೋ ರಾಜಾ ಘೋಸ್ತಸ್ಯ ಪ್ರತಿಗ್ರಹಃ II
ಧರ್ಮಹೀನನಾದ ಒಬ್ಬ ರಾಜನು ಹತ್ತು ಸಾವಿರ ಕಟುಕರಿಗೆ ಸಮಾನ. ಅವನಿಂದ ಬ್ರಾಹ್ಮಣನು ದಾನ ಪಡೆದರೆ ಘೋರ ನರಕಕ್ಕೆ ಹೋಗುತ್ತಾನೆ.
ಸನ್ಯಾಸಿಗಳು ಮಠಾಧಿಪತಿಗಳಾಗುವುದು ಮನುಸ್ಮೃತಿಯ ಬೋಧನೆಗಳು ವಿರುದ್ಧವಾದುದು.
ನ ಚೋತ್ಸಾತ ನಿಮಿತ್ತಾಭ್ಯಾಂ ನನಕ್ಷತ್ರಾಂಗ ವಿದ್ಯಯಾ I
ನಾನುಶಾಸನ ವಾದಾಭ್ಯಾಂ ಭಿಕ್ಷಾಂಲಿಪ್ಸೇತ ಕರ್ಹಿಚಿತ್ II
ಶಕುನ, ಪ್ರಶ್ನೆ, ಭವಿಷ್ಯ, ಮುಂತಾದವುಗಳನ್ನು ಹೇಳುವುದರಿಂದಾಗಲಿ, ನೀತಿಬೋಧನೆ ಮತ್ತು ವಾದ ಇವುಗಳಿಂದಾಗಲಿ ಭಿಕ್ಷೆಯನ್ನು ಪಡೆಯುವ ಸಂಚು ಹೂಡಬಾರದು.
ಅಭಿಪೂಜಿತ ಲಾಭಾಂಸ್ತು ಜುಗುಪ್ಸೇತೈವಸರ್ವಶಃ I
ಅಭಿಪೂಜಿತ ಲಾಭೈಶ್ಚ ಯತಿರ್ಮುಕ್ತೋs ಪಿಬಧ್ಯತೇ II
ಸತ್ಕಾರ ಮುಂತಾದ ಲಾಭಗಳನ್ನು ಸಂಪೂರ್ಣವಾಗಿ ಜುಗುಪ್ಸೆಯಿಂದ ನೋಡಬೇಕು. ಸನ್ಯಾಸಿಯು ಇವುಗಳಲ್ಲಿ ಆಸಕ್ತಿಯನ್ನು ತೋರಿಸಿದರೆ ಅಲ್ಲಿಯವರೆಗೂ ಮುಕ್ತನಾಗಿದ್ದರೂ ಪುನಃ ಬಂಧನಕ್ಕೊಳಗಾಗುತ್ತಾನೆ.
ವಿಧೂಮೇ ಸನ್ನಮುಸಲೇ ವ್ಯಂಗಗಾರೇ ಭುಕ್ತವಜ್ಜನೇ I
ವೃತ್ತೇ ಶರಾವಸಂಪಾತೇ ಭಿಕ್ಷಾಂ ನಿತ್ಯಂಯತಿಶ್ಚರೇತ್ II
ಸಾಯಂಕಾಲವು ಸನ್ಯಾಸಿಯ ಭಿಕ್ಷಾಕಾಲವು. ಆಗ ಮನೆಯ ಮೇಲೆ ಹೊಗೆಯಾಡುತ್ತಿರಬಾರದು. ಒನಕೆ ಸದ್ದಿರಬಾರದು. ಒಲೆಯಲ್ಲಿ ಬೆಂಕಿ ಆರಿರಬೇಕು. ಉಳಿದ ಎಲ್ಲರೂ ಉಂಡಿರಬೇಕು. ಅಡಿಗೆಪಾತ್ರೆ ತೊಳೆಯಲು ಹೊರಗಿಟ್ಟರಬೇಕು. ಆಗ ಭಿಕ್ಷೆಗಾಗಿ ಸನ್ಯಾಸಿ ಹೋಗಬೇಕು.
ಪ್ರಪಂಚದ ಎಲ್ಲ ಮತಗಳಲ್ಲೂ ಇಂತಹ ಉತ್ತಮ ಭಾವಗಳಿರುವ ಸನ್ಯಾಸಿಧರ್ಮವಿದ್ದೇ ಇದೆ. ಮಠಾಧಿಪತಿಗಳು ಸನ್ಯಾಸಿವೇಷ ಧರಿಸಿ ಈ ಸನ್ಯಾಸಿ ಧರ್ಮವನ್ನು ಬಿಟ್ಟು ಕೀರ್ತಿಕಾಂಕ್ಷಿಗಳೂ ಮಹತ್ವಾಕಾಂಕ್ಷಿಗಳೂ ಆದರೆ ಅದು ಒಂಸು ವಿಧವಾದ ವಂಚನೆಯಾಗುತ್ತದೆ. ಅದರಿಂದ ಅವರಿಗೂ ಮುಕ್ತಿಯಿಲ್ಲ ಭಕ್ತರಿಗೂ ಮುಕ್ತಿಯಿಲ್ಲ. ಮಾಯೆಯ ನಾನಾ ಸ್ವರೂಪಗಳಲ್ಲಿ ಇವರದೂ ಒಂದು ಸ್ವರೂಪವಾಗಿರುತ್ತದೆ. ತಾತ್ಕಾಲಿಕ ಸುಖ ಅಂತ್ಯದಲ್ಲಿ ದುಃಖ ಇದು ಇದರ ಪರಿಣಾಮ.
– ಲಂಕಾ ಕೃಷ್ಣಮೂರ್ತಿ