ಭಿಯಾದೇಯಮ್
(ದಿನಾಂಕ 1-9-1995 ಧರ್ಮಪ್ರಭ ಮಾಸ ಪತ್ರಿಕೆಯಲ್ಲಿ ಪ್ರಕಟಿಸಲಾಗಿದ್ದ ಲೇಖನ)
ಇದೊಂದು ನಡೆದ ಘಟನೆ. ನಾನು ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದೆ. ನನ್ನ ಕೊನೆಯ ತಮ್ಮನಿಗೆ ಆಗ ಕೇವಲ ನಾಲ್ಕು ವರ್ಷ ವಯಸ್ಸು. ನಮ್ಮ ತಂದೆ, ತಾಯಿ, ತಮ್ಮ ಇವರೆಲ್ಲಾ ನಮ್ಮ ಸ್ವಂತ ಊರಿನಲ್ಲಿದ್ದರು. ಒಂದುದಿನ ಅಕಸ್ಮಾತ್ತಾಗಿ ಅವನ ಮರಣ ವಾರ್ತೆ ನನಗೆ ಬಂತು. ನಾನು ಗಾಬರಿಯಿಂದ ನಮ್ಮ ಊರಿಗೆ ಹೊರಟೆ. ವಾರ್ತೆ ನಿಜವಾಗಿತ್ತು. ನಮ್ಮ ತಾಯಿಯ ಶೋಕವನ್ನು ನೋಡುವುದೇ ಕಷ್ಟವಾಗಿತ್ತು. ಹುಡುಗನು ಹಠಾತ್ತಾಗಿ ಮೃತನಾಗಲು ಕಾರಣವೇನೆಂದು ಕೇಳಿದೆ. ನಮ್ಮ ತಾಯಿ ನಡೆದ ಘಟನೆಯನ್ನು ಹೀಗೆ ವಿವರಿಸಿದರು :
“ನಾನು ಮನೆಯ ಒಳಗೆ ಏನೋ ಕೆಲಸ ಮಾಡುತ್ತಿದ್ದೆ. ಆಗ ಮಧ್ಯಾಹ್ನ ಒಂದು ಘಂಟೆ ಸಮಯವಿರಬಹುದು. ನಮ್ಮ ಮನೆ ಬಾಗಿಲಿಗೆ ಬಂದು ಯಾವನೋ ಒಂದು ವಿಧವಾಗಿ ಕೂಗಿಕೊಂಡ ಶಬ್ದ ಕೇಳಿಬಂತು. ಯಾರಿರಬಹುದೆಂದು ಬಾಗಿಲು ತೆರೆದು ನೋಡಿದೆ. ಒಬ್ಬ ಭಿಕ್ಷುಕ ಮೂಗ. ಅವನು ಕುಡಿಯಲು ನೀರು ಬೇಕೆಂದು ಕೈ ಸನ್ನೆ ಮಾಡಿ ತೋರಿಸಿದ. ಕೂಡಲೇ ನಾನು ಒರಳಿನ ಹತ್ತಿರ ಇಟ್ಟಿದ್ದ ತಂಬಿಗೆಯನ್ನು ತೆಗೆದುಕೊಂಡು ಹೋಗಿ ಅದರ ನೀರನ್ನು ಅವನ ಬೊಗಸೆಯಲ್ಲಿ ಸುರಿದೆ. ಅವನು ಬಹಳ ದಾಹದಿಂದ ಅದನ್ನು ಕುಡಿಯಲು ಹೋಗಿ ಆ ನೀರು ಬಾಯಿಯನ್ನು ಸೇರಿದ ಕೂಡಲೇ ಉಗುಳಿಬಿಟ್ಟು ನನ್ನನ್ನು ಬಹಳ ಕೋಪದಿಂದ ದುರುಗುಟ್ಟಿ ನೋಡಿ ಮುಖವನ್ನು ತಿರುಗಿಸಿಕೊಂಡು ಹೊರಟುಹೋದ. ಅವನ ಚೇಷ್ಟೆಯಿಂದ ನಾನು ದಿಗ್ವಾಂತಳಾಗಿ ಸ್ವಲ್ಪ ಹೊತ್ತು ನಿಂತಿದ್ದೆ. ಆಮೇಲೆ ನನಗೆ ನೆನಪಿಗೆ ಬಂತು. ಒರಳಲ್ಲಿ ನಾನು ಆ ದಿನ ಮೆಣಸಿನಪುಡಿಯನ್ನು ಕುಟ್ಟುವಾಗ ಕೈಯಲ್ಲಿ ಉರಿಕಾಣಿಸಿದಾಗ ಆ ತಂಬಿಗೆಯಲ್ಲಿ ನೀರಿಟ್ಟುಕೊಂಡು ಅನೇಕ ಸಲ ನನ್ನ ಕೈಯನ್ನು ಅದರಲ್ಲಿ ಅದ್ದಿದ್ದೆ. ಖಾರದ ನೀರನ್ನು ಅವನಿಗೆ ಹಾಕಿದ್ದರಿಂದ ಅವನಿಗೆ ಬಹಳ ಸಿಟ್ಟು ಬಂದು ಅವನು ನನ್ನನ್ನು ತೀಕ್ಷ್ಣ ದೃಷ್ಟಿಯಿಂದ ನೋಡಿ ಹೊರಟುಹೋದನೆಂಬ ವಿಷಯವು ನನಗೆ ಆಗ ಅರಿವಾಯಿತು.
ಅದೇ ದಿನ ಸಾಯಂಕಾಲಕ್ಕೆ ನಿನ್ನ ತಮ್ಮನಿಗೆ ಎಳವು ಬಂದು ಅವನು ಇದ್ದಕ್ಕಿದ್ದ ಹಾಗೆಯೇ ತೀರಿಕೊಂಡ.” ಹೀಗೆಂದು ನಮ್ಮ ತಾಯಿ ತಿಳಿಸಿದ್ದನ್ನು ಕೇಳಿ ನಾನು ಚಕಿತನಾದೆ. ಸ್ವಲ್ಪ ದಿನ ನನ್ನ ತಮ್ಮನ ಮರಣವು ನನ್ನನ್ನು ಬಹಳ ಬಾಧಿಸುತ್ತಿತ್ತು.
ತೈತ್ತಿರೀಯೋಪನಿಷತ್ತಿನಲ್ಲಿ ದಾನವನ್ನು ಹೇಗೆ ಮಾಡಬೇಕೆಂದು ತಿಳಿಸುವಾಗ ಈ ಮಾತುಗಳು ಬರುತ್ತವೆ.
‘ ತ್ರಿಯಾದೇಯಂ ‘ ಎಂದರೆ ತನ್ನ ಐಶ್ವರ್ಯಕ್ಕೆ ತಕ್ಕಂತೆ ದಾನ ಮಾಡಬೇಕು. ‘ ಹ್ರಿಯಾದೇಯಂ ‘ ಎಂದರೆ ಲಜ್ಜೆಯಿಂದ ದಾನ ಮಾಡಬೇಕು . ‘ ಭಿಯಾ ದೇಯಂ ‘ ಎಂದರೆ ಹೆದರಿಕೆಯಿಂದ ದಾನ ಮಾಡಬೇಕು. ಅಂದರೆ ತಾತ್ಸಾರವಾಗಿ ಮಾಡಬಾರದು ಎಂದರ್ಥ. ‘ ಸಂವಿದಾದೇಯಂ ‘ ಎಂದರೆ ಬುದ್ದಿ ಉಪಯೋಗಿಸಿ ವಿಚಾರಮಾಡಿ ದಾನಮಾಡಬೇಕು. ಎಂದರೆ ಸತ್ಪಾತ್ರನಿಗೆ ಮಾತ್ರ ದಾನ ಮಾಡಬೇಕು. ಹೀಗೆ ದಾನದ ವಿಷಯದಲ್ಲಿ ಉಪನಿಷತ್ತು ಹೇಳುವ ವಿವಿಧ ಹಿತವಚನಗಳಲ್ಲಿ ‘ಭಿಯಾದೇಯಂ’ ಎಂದರೆ ಹೆದರಿಕೆಯಿಂದ ದಾನ ಮಾಡಬೇಕು ಎಂಬ ವಾಕ್ಯದ ಸತ್ಯವನ್ನು ನಾನು ಮೇಲೆ ಹೇಳಿದ ಘಟನೆಯಿಂದ ಅರಿತುಕೊಂಡೆ.
ಚೆನ್ನಾಗಿ ಅರಿತುಕೊಂಡೆ ಎಂದೇ ಈಗಲೂ ದುಃಖದಿಂದ ಹೇಳಬೇಕಾಗಿದೆ. ತಿಳಿದಾಗಲಿ, ತಿಳಿಯದೆ ಆಗಲಿ ಒಬ್ಬನ ಮನಸ್ಸನ್ನು ನೋಯಿಸಿದರೆ ಅದರ ಕೆಟ್ಟ ಫಲವನ್ನು ಯಾವುದೋ ಒಂದು ರೀತಿಯಲ್ಲಿ ಅನುಭವಿಸಲೇ ಬೇಕಾಗುತ್ತದೆ ಅಲ್ಲವೇ ?
ಲಂಕಾ ಕೃಷ್ಣಮೂರ್ತಿ
(ಸಹಾಯಕ ಸಂಪಾದಕ ಧರ್ಮಪ್ರಭ)