ಕೊಡೆಯ ಗೋಪಾಲ – 8
ಲಂಕಾ ಕೃಷ್ಣಮೂರ್ತಿ
೬
ಮಾರನೆಯ ದಿನ ಗವಿಯಪ್ಪನು ಗೋಪಾಲನನ್ನು ಮಾತ್ರ ಪ್ರಧಾನಿಯ ಮನೆಗೆ ಕರೆದುಕೊಂಡು ಹೋದನು. ಪ್ರಧಾನಿಗೆ ಇಬ್ಬರೂ ಉಚಿತ ರೀತಿಯಲ್ಲಿ ಸಮಸ್ಕಾರ ಮಾಡಿದ ಮೇಲೆ ಇನ್ನು ನಾಲ್ಕೈದು ದಿನಗಳಲ್ಲಿ ಗೋಪಾಲನು ತನ್ನ ತಂದೆಯ ಕೆಲಸಕ್ಕೆ ಸೇರಿಕೊಳ್ಳಲಿರುವ ವಿಚಾರವನ್ನು ಗವಿಯಪ್ಪ ತಿಳಿಸಿದನು, ಪ್ರಧಾನಿಯು ಅಂತಃಪುರದಲ್ಲಿ ಕೆಲಸ ಮಾಡಲು ಗೋಪಾಲನು ಅರ್ಹನೇ ಎಂಬ ವಿಚಾರದಲ್ಲಿ ಆತನನ್ನು ಅನೇಕ ಪ್ರಶ್ನೆಗಳನ್ನು ಕೇಳಿ ಪರೀಕ್ಷಿಸಿದನು, ಪ್ರಧಾನಿಯು ಬಹಳ ಬುದ್ದಿವಂತನೂ, ರಾಜ ಭಕ್ತನೂ, ಪ್ರಜಾಹಿತವನ್ನು ಬಯಸುವವನೂ, ಶೀಲವಂತನೂ ಆಗಿದ್ದನು. ಆತನಿಗೆ ಗೋಪಾಲನ ತಂದೆಯ ವಿಚಾರ ಚೆನ್ನಾಗಿ ತಿಳಿದಿತ್ತು. ಗೋಪಾಲನು ಅಂತಹ ಯೋಗ್ಯನ ಮಗನಾಗಿರುವುದನ್ನೂ ಅವನ ಮುಖ ಭಾವದಲ್ಲಿ ಮತ್ತು ಚೇಷ್ಟೆಗಳಲ್ಲಿ ಕಂಡು ಬರುತ್ತಿದ್ದ ಧೀರೋದಾತ್ತತೆಯನ್ನೂ, ಆತನ ಮನಸ್ತತ್ವವನ್ನು ಪರೀಕ್ಷಿಸಲು ತಾನು ಕೇಳಿದ ಪ್ರಶ್ನೆಗಳಿಗೆ ಆತನು ಕೊಟ್ಟ ಉತ್ತರಗಳನ್ನೂ, ರಾಜಭಕ್ತನೂ, ವೃದ್ಧನೂ ಆಗಿದ್ದ ಗವಿಯಪ್ಪನು ಗೋಪಾಲನನ್ನು ಕುರಿತು ಹೇಳಿದ ವಿಶ್ವಸನೀಯ ವಾಕ್ಯಗಳನ್ನೂ ಗಮನಿಸಿ ಪ್ರಧಾನಿಯು ಗೋಪಾಲನನ್ನು ಅಂತಃಪುರದ ಕೆಲಸಕ್ಕೆ ಅರ್ಹನೆಂದು ತೀರ್ಮಾನಿಸಿದನು. ಕೂಡಲೇ ಗವಿಯಪ್ಪನನ್ನೂ, ಗೋಪಾಲನನ್ನೂ ರಾಜಾಂತಃಪುರಕ್ಕೆ ಕರೆದುಕೊಂಡು ಹೋಗಿ ಮಹಾರಾಜ ರುದ್ರಸಿಂಹನಿಗೂ ಮಹಾರಾಣಿಗೂ ಇತರ ಮುಖ್ಯ ಪರಿಚಾರಕರಿಗೂ ಗೋಪಾಲನ ವಿಷಯವನ್ನೂ ಅರ್ಹತೆಯನ್ನೂ, ಆತನು ಇಪ್ಪತ್ತು ವರ್ಷಗಳು ತುಂಬಿದ ದಿನವೇ ಬಂದು ಕೆಲಸಕ್ಕೆ ಸೇರಲಿರುವುದನ್ನೂ ತಿಳಿಸಿದನು. ಗೋಪಾಲನ ಸೌಮ್ಯ ಮತ್ತು ಧೀರೋದಾತ್ತ ಮೂರ್ತಿಯನ್ನು ನೋಡಿ ಅವರಿಗೆಲ್ಲಾ ಮನಸ್ಸಿಗೆ ಸಂತೋಷವುಂಟಾಯಿತು.
ಗವಿಯಪ್ಪನು ಈ ಕೆಲಸಗಳನ್ನೆಲ್ಲ ಮುಗಿಸಿಕೊಂಡು, ತನ್ನ ಪ್ರಯತ್ನವು ಸಫಲವಾಯಿತೆಂದು ಹರ್ಷದಿಂದ ಗೋಪಾಲನನ್ನು ಮನೆಗೆ ಕರೆ ತಂದು ರಾಮಕ್ಕನಿಗೆ ನಡೆದ ಸಂಗತಿಗಳನ್ನು ತಿಳಿಸಿದನು. ರಾಮಕ್ಕನೂ, ಗೋಪಾಲನೂ ಕೃತಜ್ಞತೆಯನ್ನು ಸೂಚಿಸಿದ ಮೇಲೆ ಅವರ ಅನುಮತಿಯನ್ನು ಪಡೆದು ಗವಿಯಪ್ಪನು ರಾಜಾಂತಃಪುರಕ್ಕೆ ಹೊರಟು ಹೋದನು. ರಾಮಕ್ಕನಿಗೆ ತನ್ನ ಮಗನು ಕೆಲಸಕ್ಕೆ ಸೇರಲಿರುವನೆಂದೂ, ಆತನು ಎಲ್ಲರಿಂದಲೂ ಯೋಗ್ಯನೆನಿಸಿ ಕೊಂಡನೆಂದೂ, ವಂಶಗೌರವವನ್ನು ಕಾಪಾಡುವವನೆಂದೂ, ಬಹಳ ಆನಂದ ವುಂಟಾಯಿತು. ಗೋಪಾಲನ ಯೋಗ್ಯತೆಯನ್ನು ಅವಳ ಮನ ಮೆಚ್ಚುವಾಗೆಲ್ಲ ಅವನ ಸೌಮ್ಯ ಧೀರಮೂರ್ತಿಯನ್ನು ಅವಳು ನೋಡುವಾಗಲೆಲ್ಲ ಅವಳಿಗೆ ಬಹಳ ಕಾಲದ ಹಿಂದೆಯೇ ತೀರಿ ಹೋಗಿದ್ದ ತನ್ನ ಗಂಡನು ನೆನಪಿಗೆ ಬರುತ್ತಿದ್ದನು. ತನ್ನನ್ನೂ, ಚಿಕ್ಕ ಮಗುವನ್ನೂ ಅನಾಥರನ್ನಾಗಿ ಬಿಟ್ಟು ತನ್ನ ಗಂಡನು ತೀರಿಕೊಂಡ ಮೇಲೆ ತಮ್ಮನ್ನು ಕಾಪಾಡಿ ವಂಶವನ್ನು ಉದ್ದಾರ ಮಾಡಿದ ಭಗವಂತನ ಕೃಪೆಯನ್ನು ಅವಳು ಸದಾ ನೆನೆಯುತ್ತಿದ್ದಳು.
ಮಾರನೆಯ ದಿನವೇ ಗೋಪಾಲನು ಕೆಲಸಕ್ಕೆ ಸೇರಬೇಕಾಗಿತ್ತು. ಆ ದಿನ ಸಾಯಂಕಾಲ ರಾಮಕ್ಕ ಗೋಪಾಲನನ್ನು ವರದಪ್ಪ ಸ್ವಾಮಿಗಳು ಆಶ್ರಮಕ್ಕೆ ಕರೆದು ಕೊಂಡುಹೋದಳು. ಆಶ್ರಮದ ಪ್ರಶಾಂತ ವಾತಾವರಣವು ಗೋಪಾಲನ ಮನಸ್ಸಿಗೆ ಬಹಳ ಶಾಂತಿಪೂರ್ಣವಾದ ಆನಂದವನ್ನುಂಟುಮಾಡಿತು. ವರದಪ್ಪ ಸ್ವಾಮಿಗಳ ಶಾಂತ ಸ್ವಭಾವವೂ, ಅಲ್ಲಿ ಶಿಷ್ಯವರ್ಗದ ಮೃದು ಮಧುರವಾದ ಭಾಷಣ ಪ್ರವರ್ತನಗಳೂ ಆತನ ಮನಸ್ಸನ್ನು ಬಹಳ ಸೆಳೆದವು. ಅವು ಆತನ ಸಹಜವಾದ ಧೈರ್ಯವನ್ನು ಅಲುಗಾಡಿಸದೆ ಅವ್ಯಕ್ತ ರೀತಿಯಲ್ಲಿ ಉನ್ನತ ಮಟ್ಟಕ್ಕೆ ಏರಿಸಿದವು. ರಾಮಕ್ಕ ಗೋಪಾಲನನ್ನು ಗುರುಗಳು ಹತ್ತಿರಕ್ಕೆ ಕರೆದುಕೊಂಡು ಹೋಗಿ ನಮಸ್ಕಾರ ಮಾಡಿಸಿ ಮಾರನೆಯ ದಿನವೇ ಆತನು ತನ್ನ ವಂಶವೃತ್ತಿಯನ್ನು ಸ್ವೀಕರಿಸುವುದಾಗಿ ತಿಳಿಸಿದಳು. ಅದನ್ನು ಕೇಳಿ ಗುರುಗಳು ಬಹಳ ಸಂತೋಷಪಟ್ಟು ಗೋಪಾಲನನ್ನು ಆಶೀರ್ವದಿಸಿದರು. ಗೋಪಾಲನನ್ನು ಹಿಂದೆಯೇ ಗುರುಗಳು ನೋಡಿದ್ದರು. ಆತನ ಸಹಜ ಶಕ್ತಿ ಧೈರ್ಯಗಳು ಅವರಿಗೆ ತಿಳಿದಿದ್ದವು. ಆತನು ಸೈನ್ಯದಲ್ಲಿ ಸೇರದೆ ವಂಶಪಾರಂಪರ್ಯವಾದ ವೃತ್ತಿಯನ್ನು ಸ್ವೀಕರಿಸಲಿರುವುದೇಕೆ? ಎಂಬುದು ಗುರುಗಳಿಗೆ ಮೊದಲೇ ಗೊತ್ತಿತ್ತು.
ಆಮೇಲೆ ಗುರುಗಳು ಶಿಷ್ಯರಿಗೆ ಪಾಠ ಪ್ರವಚನಗಳನ್ನು ಮಾಡ ತೊಡಗಿದರು. ಕಮಲಮ್ಮನು ಸಹ ಪಾಠ ಕಲಿಯುತ್ತಿದ್ದಳು. ಗುರುಗಳು ಅಭಿಜ್ಞಾನ ಶಾಕುಂತಲದಲ್ಲಿನ ಪಂಚಮಾಂಕವನ್ನು ಹೇಳುತ್ತಿದ್ದರು. ರಾಮಕ್ಕನೂ ಗೋಪಾಲನೂ ದೂರದಲ್ಲಿ ಕುಳಿತು ಗುರುಗಳ ಪಾಠ ಪ್ರವಚನಗಳನ್ನು ಕೇಳುತ್ತಿದ್ದರು. ಗುರುಗಳು ಪಾಠ ಹೇಳುತ್ತ ಈ ಕೆಳಗಿನ ಶ್ಲೋಕಕ್ಕೆ ಬಂದರು.
ಔತ್ಸುಕ್ಯ ಮಾತ್ರ ಮವಸಾದ ಯತಿ ಪ್ರತಿಷ್ಠಾ
ಕ್ಲಿಶ್ನಾತಿ ಲಬ್ಧ ಪರಿಪಾಲನ ವೃತ್ತಿ ರೇವಂ |
ನಾತಿ ಶ್ರಮಾಪ ನಯ ನಾಯ ನಚ ಶ್ರಮಾಯ
ರಾಜ್ಯಂ ಸ್ವಹಸ್ತ ಧೃತ ದಂಡಮಿವಾತ ಸತ್ರಂ ||
ಈ ಶ್ಲೋಕವನ್ನು ಗುರುಗಳು ವಿಪುಲವಾಗಿ ವಿವರಿಸಿದರು. ಇದರಲ್ಲಿ *ಆದರ್ಶ ರಾಜನಾದ ದುಷ್ಯಂತನು ರಾಜ್ಯಭಾರಮಾಡುವುದರಲ್ಲಿ ಸುಖವೂ ಇದೆ ಕೆಲಸವೂ ಜವಾಬ್ದಾರಿಯೂ ಇವೆ ಎಂಬ ವಿಷಯವನ್ನು ವಿವರಿಸಲು ಕೊಡೆ ಹಿಡಿದವನ ಉಪಮಾನವನ್ನು ಕೊಟ್ಟಿರುತ್ತಾನೆ. ಕೊಡೆಯನ್ನು ಕಷ್ಟಪಟ್ಟು ಹಿಡಿದುಕೊಂಡಿರುವ ತನಕ ಅದು ಮಾನವನಿಗೆ ನೆರಳನ್ನು ಕೊಡುತ್ತದೆ. ಸೋಮಾರಿಯಾಗಿ ಅದನ್ನು ಎತ್ತಿ ಹಿಡಿಯದಿದ್ದರೆ ಅವನಿಗೆ ನೆರಳಿಲ್ಲ. ಹೀಗೆಯೇ ರಾಜನು ಧರ್ಮಿಷ್ಠನಾಗಿ ಕಷ್ಟಪಟ್ಟು ಪ್ರಜಾ ಪಾಲನವನ್ನು ಮಾಡಿದರೆ ಅವನಿಗೆ ಸುಖವುಂಟು. ತನ್ನ ಕರ್ತವ್ಯವನ್ನು ನಿರ್ವಹಿಸದ, ಪ್ರಜಾ ಕ್ಷೇಮಕ್ಕಾಗಿ ಕ್ರಮಿಸದ ರಾಜನಿಗೆ ಸುಖವೆಲ್ಲಿ?” ಎಂಬ ಈ ಭಾವಗಳನ್ನು ಗುರುಗಳು ಮನ ಮುಟ್ಟುವಂತೆ ವಿವರಿಸಿದರು. ದೂರದಲ್ಲಿ ಕುಳಿತುಕೊಂಡು ಕೇಳುತ್ತಿದ್ದ ಗೋಪಾಲನಿಗೆ ಛತ್ರದ ಉಪಮಾನದಲ್ಲಿ ವಿಶಿಷ್ಟವಾದ ಆಸಕ್ತಿ ಉಂಟಾದುದು ಸಹಜವೇ. ಆತನು ಕೊಡೆ ಹಿಡಿಯುವ ಕೆಲಸವನ್ನು ತನ್ನ ಮುಂದಿನ ಬಾಳಿನಲ್ಲಿ ಕೊನೆಯ ತನಕ ಮಾಡಲಿರುವವನಾಗಿದ್ದನು. ಆದರೆ ಈತನು ಕೊಡೆ ಹಿಡಿಯುವುದಕ್ಕೂ ದುಷ್ಯಂತನು ಹೇಳಿದ ಉಪಮಾನಕ್ಕೂ ಒಂದು ವ್ಯತ್ಯಾಸವಿತ್ತು. ದುಷ್ಯಂತನು ತಾನು ವಹಿಸಿದ್ದ ರಾಜ್ಯವನ್ನು ಕೊಡೆಗೆ ಹೋಲಿಸಿಕೊಂಡಿದ್ದನು. ಅದನ್ನು ತಾನು ಹಿಡಿದರೆ ತನಗೆ ಅದರಿಂದ ನೆರಳು. ಇದು ಭೂಪಾಲನಾದ ದುಷ್ಯಂತನಿಗೆ ಹೊಂದಿದ್ದ ಉಪಮಾನ. ಆದರೆ ಭೂಪಾಲನಲ್ಲದ ಗೋಪಾಲನು ಕೊಡೆ ಹಿಡಿಯುವುದಕ್ಕೆ ಇದು ಹೇಗೆ ಅನ್ವಯಿಸಬೇಕು ? ಮಹಾ ಕವಿಗಳ ಉಪಮಾನಗಳು ಒಂದೊಂದು ಸಲ ಅನುದ್ದಿಷ್ಟವಾದ ಒಳ್ಳೆಯ ಅರ್ಥವನ್ನು ಸಹ ಕೊಡಬಲ್ಲವು. ಗೋಪಾಲನು ಹಿಡಿಯಲಿರುವ ಕೊಡೆ ನೆರಳು ಕೊಡಲಿರುವುದು ಆತನಿಗಲ್ಲ; ಆದರೆ ಭೂಪಾಲನಿಗೆ. ತನಗಾಗಿ ಕೊಡೆ ಹಿಡಿಯುವುದಕ್ಕಿಂತಲೂ ಇತರರಿಗೆ ಕೊಡೆ ಹಿಡಿಯುವುದು ಮತ್ತಷ್ಟು ಉತ್ತಮವಾದುದು. ತಾನು ಭೂಪಾಲನಾದರೆ ಕೊಡೆಯನ್ನು ತಾನು ಹಿಡಿದು ಕೊಳ್ಳುವುದಕ್ಕಿಂತಲೂ ಇತರರಿಗೆ ಹಿಡಿಯುವುದು ಒಳ್ಳೆಯದಲ್ಲವೇ ? ಈ ರೀತಿಯಾದ ಭಾವಗಳು ಗೋಪಾಲನ ಮನಸ್ತಂತ್ರಿಯಲ್ಲಿನ ವ್ಯಕ್ತ ನಾದದಲ್ಲಿ ಅಂತರ್ನಾದನಗಳಾಗಿ ಅವ್ಯಕ್ತವಾಗಿ ಹೊರಬಿದ್ದು ಅಲ್ಲಿಯೇ ಮಾಯವಾದವು. ಪಾಠ ಪ್ರವಚನವು ಮುಗಿದ ಕೂಡಲೆ ತದೇಕಧ್ಯಾನದಲ್ಲಿದ್ದ ಗೋಪಾಲನು ಒಂದು ನಿಟ್ಟುಸಿರನ್ನು ಬಿಟ್ಟು ಮೇಲಕ್ಕೆದ್ದನು. ರಾಮಕ್ಕನೂ ಮೇಲಕ್ಕೆದ್ದಳು. ಕಮಲಮ್ಮನು ಇವರ ಬಳಿಗೆ ಬಂದಳು. ರಾಮಕ್ಕನ ಮುಖವನ್ನೂ ನೋಡಿದಳು. ಕೆಲಸಕ್ಕೆ ಸೇರಲಿರುವ ಗೋಪಾಲನ ಮುಖವನ್ನೂ ನೋಡಿದಳು. ಗೋಪಾಲನು ಅವಳ ಮುಖವನ್ನು ತದೇಕ ದೃಷ್ಟಿಯಿಂದ ನೋಡಿ ಆ ಕಣ್ಣುಗಳಲ್ಲಿ ತೋರುತ್ತಿದ್ದ ವಿದ್ಯಾ ಪ್ರಭೆಯನ್ನು ತನ್ನೊಳಕ್ಕೆ ಒಂದು ಸಲ ಹೀರಿಕೊಂಡನು. ಕಮಲಮ್ಮನಿಗೆ ಹೇಳಿ ರಾಮಕ್ಕನೂ ಗೋಪಾಲನೂ ಮನೆಯ ಕಡೆಗೆ ಹೊರಟರು.
