ವಾನಪ್ರಸ್ಥ ಧರ್ಮ – ಸಂನ್ಯಾಸ ಧರ್ಮ
ದಿ.ಲಂಕಾ ಕೃಷ್ಣಮೂರ್ತಿ(1925-1996)
Published by LANKA KRISHNA MURTI FOUNDATION
(https://www.facebook.com/lankakrishnamurtifoundation/) Website (https://krishnamurtifoundation.com/lanka/)
LKM FOUNDATION-YOUTUBE
(https://www.youtube.com/channel/UCptmyD6GditXlBWnaRNI11A)
ವೈದಿಕ ಧರ್ಮದಲ್ಲಿ ವರ್ಣಾಶ್ರಮ ಧರ್ಮಗಳಿಗೆ ಬಹಳ ಪ್ರಾಶಸ್ತ್ಯವನ್ನು ಕೊಟ್ಟಿರುತ್ತಾರೆ. ಬ್ರಾಹ್ಮಣ ಕ್ಷತ್ರಿಯ ವೈಶ್ಯವರ್ಣಗಳಿಗೆ ಸೇರಿದ ಮಾನವರೆಲ್ಲರಿಗೂ ನಾಲ್ಕು ಆಶ್ರಮಗಳು ವಿಧಿಸಲ್ಪಟ್ಟಿವೆ. ಅವು-
1) ಬ್ರಹ್ಮಚರ್ಯಾಶ್ರಮ
2) ಗೃಹಸ್ಥಾಶ್ರಮ
3) ವಾನಪ್ರಸ್ಥಾಶ್ರಮ
4) ಸಂನ್ಯಾಸಾಶ್ರಮ
ಬ್ರಹ್ಮಚರ್ಯಾಶ್ರಮದಲ್ಲಿ ಮನೆ ಬಿಟ್ಟು ಗುರುಕುಲಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಬೇಕು. ಗೃಹಸ್ಥಾಶ್ರಮದಲ್ಲಿ ಮದುವೆ ಮಾಡಿಕೊಂಡು ಪ್ರತಿದಿನವೂ ದೇವಯಜ್ಞ, ಋಷಿಯಜ್ಞ, ಪಿತೃಯಜ್ಞ, ನರಯಜ್ಞ, ಭೂತಯಜ್ಞ ಎಂಬ ಪಂಚ ಯಜ್ಞಗಳನ್ನು ನಡೆಸುತ್ತಿರಬೇಕು. ಇವುಗಳಲ್ಲಿ ಅತಿಥಿ ಸತ್ಕಾರ ಮತ್ತು ಭಿಕ್ಷೆ ಬೇಡುವ ಬ್ರಹ್ಮಚಾರಿಗಳಿಗೂ, ಸಂನ್ಯಾಸಿಗಳಿಗೂ ಭಿಕ್ಷೆ ಕೊಡುವುದೇ ನರಯಜ್ಞ, ಮನುಷ್ಯರನ್ನು ಆಹಾರಕ್ಕಾಗಿ ಅಶ್ರಯಿಸುವ ಪ್ರಾಣಿಗಳಿಗೆ ಆಹಾರ ಕೊಡುವುದು ಭೂತಯಜ್ಞ, ತಾನು ಮತ್ತು ತನ್ನ ಹೆಂಡತಿ ಮಕ್ಕಳು, ತನ್ನ ಸೇವಕರೂ, ಅತಿಥಿಗಳೂ, ಭೂತಗಳೂ ಇವರ ಪೋಷಣೆಗಾಗಿ ಶ್ರಮಪಟ್ಟು ಕೆಲಸ ಮಾಡಬೇಕಾದುದು ಗೃಹಸ್ಥನ ಕರ್ತವ್ಯ. ಪ್ರತಿ ಗೃಹಸ್ಥನೂ ಸುಮಾರು 25 ವರ್ಷ ವಯಸ್ಸಿನವರೆಗೂ ತನ್ನ ಸಂಸಾರಕ್ಕಾಗಿಯು, ತನ್ನನ್ನಾಶ್ರಯಿಸಿದವರಿಗಾಗಿಯೂ ತನ್ನ ವರ್ಣಕ್ಕೆ ತಕ್ಕ ದುಡಿಮೆಯನ್ನು ಮಾಡಬೇಕು. ಅದರ ಸಂಪಾದನೆಯನ್ನು ದೇವರನ್ನು ಪೂಜಿಸುವ ಮತ್ತು ಪರೋಪಕಾರ ಮಾಡುವ ಯಜ್ಞಗಳಿಗೆ ವಿನಿಯೋಗಿಸಬೇಕು. ಹೀಗೆ ಗೃಹಸ್ಥ ಧರ್ಮವನ್ನು ವಿಧಿಸಿದ ಮೇಲೆ ತನ್ನ ಮೈಸುಕ್ಕು ಬಿದ್ದಿರುವುದನ್ನೂ, ಕೂದಲು ನೆರೆತಿರುವುದನ್ನೂ, ತನ್ನ ಮಗನಿಗೆ ಮಗನು ಹುಟ್ಟಿರುವುದನ್ನೂ ನೋಡಿದ ಕೂಡಲೇ ಮನೆಯನ್ನು ಬಿಟ್ಟು ಅರಣ್ಯಕ್ಕೆ ಹೋಗಲು ಪ್ರಯತ್ನಿಸಬೇಕು. ಆತನ ಹೆಂಡತಿ ಆತನ ಜೊತೆಯಲ್ಲಿ ಅರಣ್ಯಕ್ಕೆ ಬರಲು ಬಯಸಿದರೆ ಆಕೆಯ ಜೊತೆಯಲ್ಲಿ ಅರಣ್ಯಕ್ಕೆ ಹೋಗಬೇಕು. ಇಲ್ಲದಿದ್ದರೆ ಆಕೆಯನ್ನು ಮಕ್ಕಳಿಗೆ ವಹಿಸಿ ತಾನೊಬ್ಬನೇ ಅರಣ್ಯಕ್ಕೆ ಹೋಗಿ ಅಲ್ಲಿ ಕೈಲಾದಷ್ಟು ದಿವಸ ಇರುವುದಕ್ಕೆ ವಾನಪ್ರಸ್ಥಾಶ್ರಮವೆಂದು ಹೆಸರು. ವಾನಪ್ರಸ್ಥಾಶ್ರಮದಲ್ಲಿ ಅಗ್ನಿಹೋತ್ರವಿರುತ್ತದೆ. ಆಮೇಲೆ ಕೊನೆಯದಾದ ಸಂನ್ಯಾಸಾಶ್ರಮವನ್ನು ಪಡೆಯಬೇಕು. ಆಗ ಅಗ್ನಿಗಳನ್ನು ತನ್ನೊಳಕ್ಕೆ ಆವಾಹನೆ ಮಾಡಿಕೊಂಡು ಬಾಹ್ಯವಾದ ಅಗ್ನಿಯ ಆರಾಧನೆಯನ್ನೂ ಬಿಡಬೇಕು. ಭಿಕ್ಷಾಟನೆಯಿಂದ ಜೀವಿಸಬೇಕು. ತನ್ನ ಹೆಂಡತಿಯು ಜೊತೆಯಲ್ಲಿರದೆ, ಯಾರ ಸಹಾಯವೂ ಇಲ್ಲದೆ ತಾನೊಬ್ಬನೇ ಸಾಧ್ಯವಾದಷ್ಟು ದಿನ ಒಂದು ಕಡೆ ನಿಲ್ಲದೆ ತಿರುಗುತ್ತಾ ಇದ್ದು ದೇಹದ ಮೇಲಿನ ವ್ಯಾಮೋಹವನ್ನು ಪೂರ್ತಿಯಾಗಿ ಕಳೆದುಕೊಳ್ಳಬೇಕು. ಮರಣವನ್ನು ಕೋರಬಾರದು. ಅದಕ್ಕೆ ಹೆದರಬಾರದು. ಮೋಕ್ಷಕ್ಕೆ ಪ್ರಯತ್ನಿಸುತ್ತಿರಬೇಕು.
ವಾನಪ್ರಸ್ಥಾಶ್ರಮದ ಧರ್ಮಗಳನ್ನು ಸಂಗ್ರಹವಾಗಿ ಕೆಳಗೆ ನಿರೂಪಿಸಲಾಗಿದೆ. ಅರಣ್ಯದಲ್ಲಿ ಸಿಗುವ ನೀವಾರಾದಿ ತೃಣ ಧಾನ್ಯಗಳಿಂದ, ಒಳ್ಳೆಯ ಗಡ್ಡೆ-ಗೆಣಸು-ಹಣ್ಣುಗಳಿಂದ ದೇವಯಜ್ಞ. ಋಷಿಯಜ್ಞ, ಪಿತೃಯಜ್ಞ ಮತ್ತು ಅತಿಥಿ ಸತ್ಕಾರ (ನರಯಜ್ಞ) ಮತ್ತು ಭೂತಯಜ್ಞವನ್ನು ಕೈಲಾದಷ್ಟು ಮಾಡುತ್ತಿರಬೇಕು. ಬೆಳಗ್ಗೆ ಮತ್ತು ಸಾಯಂಕಾಲ ಮೀಯಬೇಕು. ಚರ್ಮ ಅಥವಾ ತೊಗಟೆಯನ್ನು ಉಡಬೇಕು. ಗಡ್ಡ ಮೀಸೆ, ರೋಮ, ಕೂದಲು, ಉಗುರುಗಳನ್ನು ಕತ್ತರಿಸಬಾರದು. ಸದಾ ವೇದಾಧ್ಯಯನ ಮಾಡಬೇಕು. ಶೀತೋಷ್ಣಗಳನ್ನು ಸಹಿಸಬೇಕು. ಸಕಲ ಪ್ರಾಣಿಗಳಿಗೂ ಮಿತ್ರನಂತೆ ವರ್ತಿಸಬೇಕು. ದಯಾಮಯನಾಗಿ ಪ್ರತಿಗ್ರಹ ಮಾಡದೆ ದಾನ ಮಾಡುತ್ತಾ ಸರ್ವೋಪಕಾರಕನಾಗಿರಬೇಕು. ನೀರಿನಲ್ಲಿ, ನೆಲದಲ್ಲಿ ಹುಟ್ಟುವ ತರಕಾರಿ, ಹೂ, ಹಣ್ಣು, ಗೆಣಸು, ಪವಿತ್ರ ಮರಗಳದ್ದಾದರೆ ಅದನ್ನು, ಅಂತಹ ಬೀಜದ ಎಣ್ಣೆ ಇವುಗಳನ್ನು ಮಾತ್ರ ಸೇವಿಸಬೇಕು. ಇವುಗಳಿಂದಲೇ ಯಜ್ಞ ಮಾಡಬೇಕು. ಮದ್ಯ, ಮಾಂಸ ಮತ್ತು ಕೆಲವು ಕೆಟ್ಟ ವೃಕ್ಷಗಳ ಆಹಾರವನ್ನು ತ್ಯಜಿಸಬೇಕು. ಆಶ್ವಯುಜ ಮಾಸದಲ್ಲಿ ಆವರೆಗೆ ಖರ್ಚಾಗಿ ಉಳಿದಿರುವ ಧಾನ್ಯ, ಹಳೆಯ ಬಟ್ಟೆ, ಹಣ್ಣು-ಹಂಪಲು ಎಲ್ಲ ಬಿಟ್ಟು ಹೊಸದು ಸಂಪಾದಿಸಬೇಕು. ನೇಗಿಲಿನಿಂದ ಉತ್ತು ಬೆಳೆಸಿದ ಧಾನ್ಯವನ್ನು ಪೂರ್ತಿಯಾಗಿ ವರ್ಜಿಸಬೇಕು. ಊರಿನ ಸಾಮಗ್ರಿಗಳನ್ನು ಬಿಡಬೇಕು. ಕಾಡಿನದನ್ನೇ ಉಪಯೋಗಿಸಬೇಕು.
ರಾತ್ರಿ ಆಹಾರ ಅಥವಾ ಹಗಲು ಆಹಾರ ಮಾಡುತ್ತಿದ್ದು ಕ್ರಮೇಣ ನಾಲ್ಕು ದಿನಕ್ಕೊಮ್ಮೆ ಆಮೇಲೆ ಎಂಟು ದಿನಕ್ಕೊಮ್ಮೆ ಹೀಗೆ ಆಹಾರವನ್ನು ಕಡಿಮೆ ಮಾಡುತ್ತಾ ಬರಬೇಕು. ಚಂದ್ರಕಲೆಯು ವರ್ಜಿಸಿ, ಕ್ಷೀಣಿಸುವಂತೆ ಆಹಾರದ ತುತ್ತನ್ನು ಹೆಚ್ಚು ಕಡಿಮೆ ಮಾಡುತ್ತಾ ಹೋಗುವುದು, ಚಾಂದ್ರಾಯಣ ವ್ರತ, ಇದನ್ನು ಮಾಡಬಹುದು. ಆಗ ಅಮಾವಾಸ್ಯೆಯಂದು ಗಂಜಿ ಕುಡಿಯಬೇಕು. ವೈಖಾನಸ ವ್ರತವನ್ನಾಚರಿಸುವವರು ಅಗ್ನಿ ಪಕ್ವವಾದುದನ್ನು ಬಿಟ್ಟು ಅದಷ್ಟಕ್ಕದೇ ಬೀಳುವ ಪುಷ್ಪಮೂಲ ಫಲಗಳನ್ನು ತಿಂದು ಜೀವಿಸಬೇಕು. ವಾನಪ್ರಸ್ಥಾಶ್ರಮಗಳು ಬೇಸಿಗೆಯಲ್ಲಿ ಬಿಸಿಲಿನಲ್ಲಿ ನಿಂತು, ವರ್ಷಾಕಾಲದಲ್ಲಿ ಮಳೆಗೆ ಮೈಯೊಡ್ಡಿ, ಛಳಿಗಾಲದಲ್ಲಿ ಒದ್ದೆ ಬಟ್ಟೆಗಳನ್ನು ಧರಿಸಿ ದೇಹವನ್ನು ದಂಡಿಸಬೇಕು. ವಾನಪ್ರಸ್ಥಾಶ್ರಮದಲ್ಲಿ ಅಗ್ನಿಗಳನ್ನು ಬಾಹ್ಯವಾಗಿ ಬಿಟ್ಟು ತನ್ನೊಳಗೇ ಆವಾಹನೆ ಮಾಡಿಕೊಂಡು ಅಗ್ನಿಯಿಲ್ಲದೆ, ಮನೆಯಿಲ್ಲದೆ, ಕಾಡಾಡಿಯಾಗಿಯೂ ಜೀವಿಸಬಹುದು. ವಾನಪ್ರಸ್ಥಾಶ್ರಮದಲ್ಲಿರುವವರು ಹೀಗೆ ಅನೇಕ ನಿಯಮಗಳನ್ನು ಅನುಸರಿಸುತ್ತಾ ಮೋಕ್ಷ ಸಿದ್ದಿಗೆ ಬೇಕಾದ ಅನೇಕ ಉಪನಿಷತ್ತುಗಳನ್ನು ಮನನ ಮಾಡುತ್ತಿರಬೇಕು.
ಹೀಗೆ ಆಯಸ್ಸಿನ ಮೂರು ಭಾಗಗಳನ್ನು ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥವೆಂಬ ಮೂರು ಆಶ್ರಮಗಳಲ್ಲಿ ಕಳೆದು ನಾಲ್ಕನೇ ಭಾಗವನ್ನು ಸಂನ್ಯಾಸಾಶ್ರಮದಲ್ಲಿ ಕಳೆಯಬೇಕು. ಸಂನ್ಯಾಸದಲ್ಲಿ ಮುಖ್ಯವಾಗಿರಬೇಕಾದುದು ಸರ್ವಸಂಗ ಪರಿತ್ಯಾಗ ಮತ್ತು ಸಂಪೂರ್ಣ ಜ್ಞಾನ ಮತ್ತು ವೈರಾಗ್ಯ. ಸಂನ್ಯಾಸಿಯು ತನ್ನಿಂದ ಯಾವ ಪ್ರಾಣಿಗೂ ಸ್ವಲ್ಪವೂ ಹೆದರಿಕೆ ಅಥವಾ ತೊಂದರೆಯಾಗದಂತೆ ವರ್ತಿಸಬೇಕು.
ಮನುಸ್ಮೃತಿಯಲ್ಲಿ ಹೇಳಿರುವ ಸಂನ್ಯಾಸಿ ಧರ್ಮಗಳನ್ನು ಸಂಗ್ರಹವಾಗಿ ಕೆಳಗೆ ಕೊಡಲಾಗಿದೆ.
ಸಂನ್ಯಾಸಿಗೆ ಅಗ್ನಿಯಿಲ್ಲ, ಮನೆಯಿಲ್ಲ, ದೇಹಸುಖದಲ್ಲಿ ಅನಾಸಕ್ತಿಯಿರಬೇಕು. ಯಾವಾಗಲೂ ಬ್ರಹ್ಮತತ್ವವನ್ನು ಮನನ ಮಾಡುತ್ತಿರಬೇಕು. ಊಟಕ್ಕಾಗಿ ಒಂದು ಗ್ರಾಮವನ್ನು ಆಶ್ರಯಿಸಿಕೊಂಡಿರಬೇಕು. ಭಿಕ್ಞಾಟನೆಗೆ ಮಣ್ಣಿನವೋಡು, ಮರದಡಿಯಲ್ಲಿ ವಾಸ, ಮಾನ ಮುಚ್ಚುವಷ್ಟು ಬಟ್ಟೆ, ಶತ್ರುಮಿತ್ರಭಾವ ಬಿಡುವುದು ಇವು ಸಂನ್ಯಾಸಿಯ ಧರ್ಮಗಳು, ಸಂನ್ಯಾಸಿಯು ಸಾಯಲು, ಬದುಕಲು ಎರಡಕ್ಕೂ ಆಸೆಪಡಬಾರದು. ಸಂಬಳದವನು ಯಜಮಾನನ ಆಜ್ಞೆಯನ್ನು ಕಾದಿರುವಂತೆ ಮೋಕ್ಷ ಕಾಲವನ್ನು ಎದುರು ನೋಡುತ್ತಿರಬೇಕು. ತನ್ನಿಂದ ಯಾವ ಪ್ರಾಣಿಗೂ ಹಿಂಸೆ ಆಗದಿರಲು ನೆಲ ನೋಡಿ ಪಾದವನ್ನಿಡಬೇಕು. ನೀರನ್ನು ಬಟ್ಟೆಯಲ್ಲಿ ಗಾಳಿಸಿ ಕುಡಿಯಬೇಕು. ಸುಳ್ಳಾಡಬಾರದು. ಪರಿಶುದ್ಧವಾದ ಮನಸ್ಸಿನಿಂದ ಕೆಲಸ ಮಾಡಬೇಕು. ಯಾರಿಗೂ ಅವಮಾನ ಮಾಡಬಾರದು. ಬೇರೆಯವರು ತನ್ನನ್ನು ದೂಷಿಸಿದರೆ ಸಹಿಸಿಕೊಂಡಿರಬೇಕು. ಯಾರೊಂದಿಗೂ ವೈರವಿರಬಾರದು. ಶಕುನ, ಪ್ರಶ್ನೆ, ಜ್ಯೋತಿಷ್ಯ ಮುಂತಾದುವನ್ನು ಹೇಳಿ ಭಿಕ್ಷೆ ಕೊಡುವಂತೆ ಮಾಡಬಾರದು. ಭಿಕ್ಷೆಗಾಗಿ ಹೊರಟ ಸಂನ್ಯಾಸಿಯು ಒಂದು ಮನೆಯಲ್ಲಿ ತಪಸ್ವಿಗಳಾಗಲಿ, ಬ್ರಾಹ್ಮಣರಾಗಲಿ ತುಂಬಿದ್ದರೆ ಆ ಮನೆಗೆ ಹೋಗಿ ಭಿಕ್ಷೆ ಬೇಡಬಾರದು. ಅಥವಾ ಮನೆಯ ಮುಂದೆ ನಾಯಿಗಳಾಗಲಿ, ಹಕ್ಕಿಗಳಾಗಲಿ, ಭಿಕ್ಷುಕರಾಗಲಿ ಆಹಾರಕ್ಕೆ ಕಾದಿದ್ದರೆ ಅಂತಹ ಮನೆಗೆ ಹೋಗಬಾರದು. ಭಿಕ್ಷೆಗಾಗಿ ಸಂನ್ಯಾಸಿನಿಯು ಬಹಳ ತಡವಾಗಿ ಹೋಗಬೇಕು. ಆತನು ಹೋಗುವ ವೇಳೆಗೆ ಮನೆಯಲ್ಲಿ ಹೊಗೆಯಿರಬಾರದು. ಒನಕೆಯ ಸದ್ದು ಕೇಳಿಸುತ್ತಿರಬಾರದು. ಮನೆಯವರೆಲ್ಲಾ ಊಟ ಮಾಡಿರಬೇಕು. ಅಡಿಗೆ ಪಾತ್ರೆ ತೊಳೆಯಲು ಹೊರಗಿಟ್ಟಿರಬೇಕು. ಭಿಕ್ಷೆ ಸಿಕ್ಕಿದರೆ ಸಂತೋಷಿಸಬಾರದು. ಸಿಗದಿದ್ದರೆ ದುಃಖಿಸಬಾರದು.
ಇಂತಹ ಅತ್ಯುತ್ತಮವಾದ ಆಶ್ರಮಗಳ ಧರ್ಮಗಳನ್ನು ಪ್ರಾಚೀನಕಾಲದಲ್ಲಿ ದ್ವಿಜರು ಅನುಸರಿಸುತ್ತಿದ್ದರೆಂಬುದು ಮಾನವ ಚರಿತ್ರೆಯಲ್ಲಿಯೇ ಸ್ತುತ್ಯಾರ್ಹವಾದುದು.
ಲಂಕಾ ಕೃಷ್ಣಮೂರ್ತಿ
(Earliar Published in Veda Dharma Magazine January 1996 Edition)