Here is a short story written long back in 1982 by late Sri. P.Venkatachalam who was a renowned teacher in Telugu. He was very much interested in Kannnada launguage. He was related to Lanka Krishna Murti who received great encouragement from him in the study of Telugu Literature. On the occasion of his birth Centinary we feel honoured to publish it on behalf of the foundation and place it on its website.
ನಿಜಾಯಿತಿ
ಪಿ .ವೆಂಕಟಾಚಲಂ
ರಿಟಾಯರ್ಡ್ ಸಬ್ ಜಡ್ಜ್ ಶಾಮಣ್ಣ್ಣನವರು ಮಗಳ ವಿವಾಹಕ್ಕೆ ಮಹೂರ್ತ ನಿರ್ಧರಿಸಿ, ಮದುವೆಯ ಕೆಲಸಗಳಲ್ಲಿ ನಿಮಗ್ನರಾಗಿದ್ದರು. ಕಲ್ಯಾಣ ಮಂಟಪಕ್ಕೆ, ಭಜಂತ್ರಿಗಳಿಗೆ, ಅಡಿಗೆಯವರಿಗೆ ಅಡ್ವಾನ್ಸ್ ಗಳನ್ನು ಕೊಟ್ಟು, ಪುರೋಹಿತರನ್ನು ಏರ್ಪಾಡು ಮಾಡಿಕೊಂಡು, ಶುಭಲೇಖನಗಳನ್ನು ಕಳುಹಿಸುತ್ತಿದ್ದರು. ಹತ್ತು ವರುಷಗಳ ಕೆಳಗೆ ಮದುವೆಗಾಗಿ ಬ್ಯಾಂಕಿನಲ್ಲಿ ಡೆಪಾಸಿಟ್ ಮಾಡಿದ್ದ ಹತ್ತು ಸಾವಿರ ರೂಪಾಯಿಗಳು ಈಗಿನ ದರಗಳಲ್ಲಿ ಏನೂ ಸಾಕಾಗುವುದಿಲ್ಲ, ಇನ್ನೂ ಇಪ್ಪತ್ತು ಸಾವಿರ ಜಮಾ ಮಾಡಬೇಕಾಗಿಬಂತು. ಮಹೂರ್ತದ ದಿವಸ ಹತ್ತಿರಕ್ಕೆ ಬಂತು. ಶಾಮಣ್ಣನವರು ತಮ್ಮ ಸ್ವಸ್ಥಳವಾದ ದೇವನಹಳ್ಳಿಗೆ ಹೋಗಿ ಇದ್ದ ಸ್ವಲ್ಪ ಜಮೀನನ್ನು ಮಾರಿಬಿಟ್ಟು ಬಂದ ಹಣವನ್ನು ಬೇರೆ ಕಡೆ ಸಾಲ ತಂದ ಹಣವನ್ನು ಒಟ್ಟು ಇಪ್ಪತ್ತು ಸಾವಿರ ರೂಪಾಯಿಗಳನ್ನು ಸರಿ ಮಾಡಿಕೊಂಡು, ಒಂದು ಬ್ಯಾಗಿನಲ್ಲಿ ಇಟ್ಟುಕೊಂಡು ಬೆಂಗಳೂರಿಗೆ ವಾಪಾಸ್ ಬಂದರು. ಕಲಾಸಿಪಾಳ್ಯದಿಂದ ತಮ್ಮ ಮನೆಯಿದ್ದ ಮಲ್ಲೇಶ್ವರಮ್ ಗೆ ಹೋಗಬೇಕು. ಅವತ್ತು ಸಿಟೀ ಬಸ್ಸುಗಳೆಲ್ಲ ಸ್ಟ್ರೈಕ್ ಮಾಡುತ್ತಿದ್ದರಿಂದ ಆಟೋನಲ್ಲೇ ಹೋಗಬೇಕಾಗಿಬಂತು. ಒಂದು ಆಟೋನ ಕರೆದು ಕೇಳಿದರೆ ಮೀಟರ್ ಮೇಲೆ ಮೂವತ್ತು ಕೊಡಬೇಕೆಂದನು. ಮತ್ಥೊಬ್ಬನೂ ಹಾಗೇ ಹೇಳಿದ. ಅರವತ್ತು ಪೈಸೆಗಳಿಂದ ಮನೆ ಸೇರುವುದಕ್ಕೆ ಮೀಟರ್ ಚಾರ್ಜ್ ಮೇಲೆ ಮೂವತ್ತು ಪೈಸೆ ಕೊಡಬೇಕೆಂದರೆ ಶಾಮಣ್ಣನವರ ಮನಸ್ಸಿಗೆ ಬಹಳ ಬೇಜಾರಾಯಿತು.ಅಷ್ಟು ದೂರ ನಡೆದು ಹೋಗುವುದಕ್ಕೆ ಸಾಧ್ಯವಿಲ್ಲ,ಏನು ಮಾಡುವುದು. ವಿಧಿಯಿಲ್ಲ, ಆಗಲಿ ಕೇಳಿದಷ್ಟು ಕೊಟ್ಟು ಹೋಗೋಣ ಎಂದು ಕೊಂಡು, ನಿಂತಿದ್ದ ಒಂದು ರಿಕ್ಷಾ ಹತ್ತಿರಕ್ಕೆ ಹೋಗಿ “ಮಲ್ಲೇಶ್ವರಕ್ಕೆ ಬರ್ತೀಯೇನಯ್ಯ” ಅಂತ ಕೇಳಿದರು. “ಕೂತುಕೊಳ್ಳಿ ಸ್ವಾಮಿ “ ಎಂದು ಡ್ರೈವರ್ ಸ್ಟಾರ್ಟ್ ಮಾಡಿದ. ಕುಳಿತುಕೊಂಡು “ ಏನು ಕೊಡಬೇಕಪ್ಪ” ಅಂತ ಕೇಳಿದರು ಶಾಮಣ್ಣನವರು. “ ಮೀಟರ್ ಎಷ್ಟಾದರೆ ಅಷ್ಟು ಕೊಡಿಸ್ವಾಮಿ “ ಅಂದನು ಡ್ರೈವರ್. “ಇದೇನಯ್ಯ! ಅವರೆಲ್ಲ ಅಷ್ಟಷ್ಟು ಕೇಳ್ತಾ ಇದ್ದರೆ ನೀನು ಹೀಗೆ ಹೇಳುತ್ತಿದ್ದೀಯಲ್ಲ” ಅಂದರು. “ ಸಿಟಿ ಬಸ್ಸುಗಳು ಸ್ಟ್ರೈಕ್ ಮಾಡ್ತಾ ಇವೆ. ಈವತ್ತು ಎರಡು ಘಂಟೆಯಿಂದ ನಾವು ಕೂಡ ಸಿಂಪತಿಟಿಕ್ ಸ್ಟ್ರೈಕ್ ಮಾಡಬೇಕೆಂದು ನಿರ್ಣಯವಾಗಿದೆ. ಅಷ್ಟರೊಳಗೆ ಸಾಧ್ಯವಾದಷ್ಟು ದುಡ್ಡು ಸಂಪಾದಿಸಿಕೊಂಬೋಣ ಎಂದು ಅವರು ಹಾಗೇ ಕೇಳುತ್ತಿದ್ದಾರೆ. ಜನರನ್ನು ಇಕ್ಕಟ್ಟಿನಲ್ಲಿಟ್ಟು ತೊಂದರೆ ಕೊಡೋದು ನನಗೆ ಇಷ್ಟವಿಲ್ಲ ಸ್ವಾಮಿ” ಅಂದನು. ಅವನ ಒಳ್ಳೇತನಕ್ಕೆ ಶಾಮಣ್ಣನವರು ಬಹಳ ಸಂತೋಷಪಟ್ಟರು. ಅವರ ಮನೆ ಬಂತು. ಶಾಮಣ್ಣನವರು ಇಳಿದು ಮೀಟರ್ ಪ್ರಕಾರ ಆದ ನಾಲಕ್ಕೂವರೆಗೆ ಮತ್ತೊ೦ದು ಹತ್ತು ರೂಪಾಯಿ ಸೇರಿಸಿ ಕೊಟ್ಟರು. ಬೇಡ ಸ್ವಾಮಿ, ಹೆಚ್ಚು ಬೇಡವೆ೦ದು ಹತ್ತು ರೂಪಾಯಿ ವಾಪಸ್ಸು ಕೊಡುವುದಕ್ಕೆ ಹೋದನು. ಆದರೂ ಬಲವ೦ತ ಮಾಡಿ ಹತ್ತು ರೂಪಾಯಿ ಕೊಟ್ಟು ಶಾಮಣ್ಣನವರು ಮನೆ ಒಳಕ್ಕೆ ಹೋದರು. ಆಟೋ ಹೊರಟು ಹೋಯಿತು. ವರಾ೦ಡಾದಲ್ಲಿದ್ದ ಬೆಂಚಿನ ಮೇಲೆ ಕುಳಿತುಕೊ೦ಡು ಬೂಟು ಬಿಚ್ಚಿ, ಒಳಕ್ಕೆ ಹೋಗೋಣೆ೦ದು ಶಾಮಣ್ಣನವರು ಎದ್ದು ಕ್ಯಾಷ್ ಬ್ಯಾಗ್ ನೊಡಿಕೊ೦ಡರು. ಕ್ಯಾಷ್ ಬ್ಯಾಗ್ ಕಾಣಿಸಲಿಲ್ಲ. ಆಟೋವೊಳಗೆ ಮರೆತು ಬಂದಿದ್ದು, ಆಟೋ ಹೋಯಿತು, ಇಪ್ಪತ್ತು ಸಾವಿರ ಹೋಯಿತು. ಏನು ಮಾಡಲೀ. ಆಟೋನವನು ಇನ್ನೆಲ್ಲಿ ಸಿಕ್ಕುತ್ತಾನೆ. ಸಿಕ್ಕಿದರೂ ಅವನು ಅಷ್ಟೂ ರೊಕ್ಕ ವಾಪಸ್ಸ್ ಕೊದುತ್ತಾನೆ? ಯೆಂದು ಕಣ್ಣೀರು ಒರೆಸಿಕೊಳ್ಳುತ್ತಾ ಕುಸಿಬಿದ್ದರು. ಹೆಂಗಸರು ಎಷ್ಟ್ ಆನ್ಯಾಯವಾಯಿತು ಎಂದು ದುಖಃ ಪಟ್ಟರು. ಮನೆಯಲ್ಲಿ ಯೆಲ್ಲರೂ ಸೇರಿ ಆಡಿದ ಉದಾಸೀನದ ಮಾತುಗಳು ಹೆಚ್ಚಾಯಿತು. ಆಟೋ ಏನಾದರೂ ಕಾಣಿಸುತ್ತೇನೊ ನೋಡೋಣಾಯೆಂದು ವ್ಯರ್ಥ ಪ್ರಯತ್ನ ಮಾಡಿದರು. ಹುಡುಗರು ಈ ಸಿಟಿಯೊಳಗೆ ಎಷ್ಟು ಆಟೋಗಳು. ಯಾರನ್ನು ನೋಡುವುದು. ಇದು ನಮ್ಮ ಹುಚ್ಚು, ಅಂದು ಕೊಂಡು ವಾಪಸು ಬಂದರು. ಸಮುದ್ರದಲ್ಲಿ ಬಿದ್ದ ವಸ್ತುವು ಸಿಗುತ್ತೆ? ಸಮುದ್ರದಂಥಾ ನಗರದಲ್ಲಿ ಹೊದ ಹಣ ಹೇಗೆ ಸಿಗುತ್ತೆ? ಶಾಮಣ್ಣನವರಿಗೆ ಊಟ ಸೇರಲಿಲ್ಲ. ಎಂಜಲು ಮಾಡಿಕೊಂಡು ಈಜೀ ಚೇರನಲ್ಲಿ ಬಿದ್ದರು. ಅವರಿಗೆ ಒಂದೇ ಆಲೋಚನೆ. ಈ ಮದುವೆ ಹೇಗೆ ಆಗುತ್ತೆ. ಇಪ್ಪತ್ತು ಸಾವಿರ ಎಲ್ಲಿ ತರಲಿ? ಬಂಧು ಬಳಗದಲ್ಲಿ ಎಷ್ಟು ಅವಮಾನವಾಗುತ್ತೆ. ನಾನು ಯಾರಿಗೂ ಅಪಕಾರ ಮಾಡಲಿಲ್ಲವೆ. ದೇವರು ನನಗೆ ಏಕೆ ಈ ಶಿಕ್ಷೆ ಕೊಟ್ಟರು! ಇದು ನನ್ನ ಪೂರ್ವ ಜನ್ಮ ಪಾಪಕ್ಕೆ ಫಲಿತಯೆಂದು ಏನೇನೊ ಆಲೋಚನೆಗಳು ಮಾಡುತ್ತ ಇದ್ದರು. ಮಡದಿ ಮಕ್ಕಳೆಲ್ಲಾ ನಿರುತ್ಸಾಹರಾದರು. ಆವತ್ತು ಯಾರಿಗೂ ಏನೂ ಕೆಲಸ ಮಾಡಲು ತೋಚಲಿಲ್ಲ. ಮನೆಯೆಲ್ಲಾ ದುಃಖಮಯವಾಗಿತ್ತು.
ಶಾಮಣ್ಣನವರನ್ನು ಮನೆಯಲ್ಲಿ ಇಳಿಸಿಬಂದ ಆಟೋ ಡ್ರೈವರ್ ಮಾಧವ ಮೂರ್ತಿ ಸ್ವಲ್ಪ ದೂರ ಹೋದಮೇಲೆ ಹಿಂದಿರುಗಿ ನೋಡಿದನು. ಆಟೋವೊಳಗೆ ಕ್ಯಾಷ್ ಬ್ಯಾಗ್ ಕಾಣೀಸಿತು. ಗಾಡಿಯನ್ನು ನಿಲ್ಲಿಸಿ ಅದನ್ನು ತೆಗೆದುಕೊಂಡು ತೆಗೆದು ನೋಡಿದ.ಎಷ್ಟು ಹಣ? ಯಾರಿಗೂ ಕಾಣದೆ ಎಣಿಸಿದ. ಇಪ್ಪತ್ಥು ಸಾವಿರ ರೂಪಾಯಿಗಳನ್ನು ನೋಡಿ ದಿಗ್ಬ್ರಾಂತನಾದನು. ಅವನ ದೇಹ ಗಜಗಜವಣಕಿತು.ಈಗಯೇನು ಮಾಡಲಿ! ಈಗಲೇ ಹೋಗಿ ಅವರಿಗೆ ವಾಪಸ್ ಕೊಡೋಣಾ ಅಂದು ಕೊಂಡನು. ಅವನ ಮನಸ್ಸು ಚಲಿಸಿತು. ಕೊಡುವುದು ಬೇಡ. ಮನೆಗೆ ಹೋಗಿ ನಿಧಾನವಾಗಿ ಯೋಚನೆ ಮಾಡೋಣ ಅಂದುಕೊಂಡು, ಮಧ್ಯಾಹ್ನದ ಊಟಕ್ಕೆ ಮಾವಳ್ಳಿಯಲ್ಲಿದ್ದ ತಮ್ಮನ ಮನೆಗೆ ಹೋದನು. ಕೈಕಾಲು ತೊಳೆದುಕೊಂಡು ಊಟಕ್ಕೆ ಕೂತನು. ಆಲೋಚನೆ ಮಂಪರಿನಲ್ಲಿದ್ದ ಮಾಧವಮೂರ್ತಿ ಪರಧ್ಯಾನದಿಂದ ಸರಿಯಾಗಿ ಊಟ ಮಾಡಲಿಲ್ಲ. ಬಡಿಸುತ್ತಿದ್ದ ತಂಗಿ “ ಏನಣ್ಣಯ್ಯ! ಸರಿಯಾಗಿ ಊಟಮಾಡಲಿಲ್ಲ. ಮಯ್ಯಲ್ಲಿ ಚೆನ್ನಾಗಿಲ್ಲವಾ?” ಅಂತ ಕೇಳಿದಳು. “ಏನೂ ಇಲ್ಲಮ್ಮಾ!! ಚೆನ್ನಾಗೇ ಇದೆ”. ಅಂತಾ ಹೇಳಿ ಕೈತೊಳಕೊಂಡು ಹೋಗಿ ವಿಶ್ರಾಂತಿಗಾಗಿ ಈಜೀಚೇರ್ ನಲ್ಲಿ ಬಿದ್ದನು. ಚಿಕ್ಕ ತಂಗಿ ಬಂದು, “ ಅಣ್ಣಾ! ಮನೆಯಾತ ಬಂದಿದ್ದ. ಇಷ್ಟು ದಿನವಾದರೂ ಬಾಡಿಗೆ ಕೊಡಲಿಲ್ಲವೆಂದು ಕೂಗಿಕೊಂಡು ಹೋದ ಯೆಂದು ಹೇಳಿದಳು. “ ಆಗಲಿ ಅಮ್ಮಾ ನೋಡೋಣ ಆಂದನು ಮಾಧವ ಮೂರ್ತಿ. ಅಷ್ಟರೊಳಗೆ ಅಂಗಡಿಯವನು ಬಂದು “ ಏನು ಸ್ವಾಮೀ! ಇಷ್ಟು ದಿವಸವಾದರೂ ದುಡ್ಡು ಕೊಡಲಿಲ್ಲ. ಹಾಗೆ ಮಾಡಿದರೆ ಹೇಗೆ. ನಿಮ್ಮಂತವರು ಕೊಟ್ಟರೆ ತಾನೆ ನಮ್ಮ ವ್ಯಾಪಾರ ನಡೆಯುವುದು” ಎಂದು ಧ್ವನಿ ಹೆಚ್ಚಿಸಿ ಮಾತಾಡಿದನು. “ ತಾವು ಕಾದ್ರೆ! ಕೊಡ್ತೀನಿ.ಸ್ವಲ್ಪ ನಿಧಾನಿಸಿ’ ಎಂದು ವಿನಯಪೂರ್ವಕವಾದ ಸಣ್ಣ ಧ್ವನಿಯಿಂದ ಸಮಾಧಾನ ಮಾಡಿ ಕಳಿಸಿದನು.
ಮಾಧವ ಮೂರ್ತಿ ಬಿ.ಎ. ಫ಼್ಯ್ ನಲ್ ಓದುತ್ತಿರುವಾಗ ಅವರ ತಂದೆಯವರು ತೀರಿಕೊಂಡರು. ತಾಯಿ, ಇಬ್ಬರು ತಂಗಿಗಳು, ಒಬ್ಬ ತಮ್ಮನ ಪೋಷಿಸುವ ಭಾರ ಅವನ ಮೇಲೆ ಬಿತ್ತು. ಓದು ಪೂರ್ತಿಯಾಗಲಿಲ್ಲ.ಎಷ್ಟು ಪ್ರಯತ್ನ ಮಾಡಿದರೂ ಯಾವ ಉದ್ಯೋಗವೂ ಸಿಕ್ಕಲಿಲ್ಲ. ಕೊನೆಗೆ ಎಷ್ಟೋ ಕಷ್ಟ ಬಿದ್ದು ಆಟೋ ಲೈಸನ್ಸನ್ನು ಸಂಪಾದಿಸಿ, ಅದರ ವರಮಾನದಿಂದ ಕಾಲ ತಳ್ಳುತ್ತಿದ್ದನು. ದೊಡ್ಡ ತಂಗಿಗೆ ಮದುವೆ ಮಾಡಬೇಕು. ಚಿಕ್ಕ ತಂಗಿಯನ್ನು,ತಮ್ಮನನ್ನು ಓದಿಸಬೇಕು. ಅವರ ಫೀಜುಗಳಿಗೆ ಎಷ್ಟು ಆಗುತ್ತೆ. ಎಷ್ಟೋ ಸಮಸ್ಯೆಗಳಿಂದ ಚಡಪಡಿಸುತ್ತಿದ್ದನು ಮಾಧವಮುರ್ತಿ.
ಆತನ ಮನಸಿನಲ್ಲಿ ಆಲೋಚನೆಗಳಿಗೆ ಘರ್ಷಣೆ ಹೆಚ್ಚಾಯಿತು. ಸಿಕ್ಕಿದ ಹಣ ವಾಪಸು ಕೊಡೋಣವೇ? ಛೇ . ಅಷ್ಟು ಹುಚ್ಚುತನ ಬೇಕೇ. ಇರುತ್ತದೆ ?- ಪಾಪ! ಆ ಮುದುಕ ಎಷ್ಟು ದುಃಖಿತನಾಗಿರುತ್ತಾನೋ. ಈ ಹಣವನ್ನು ಕೊಟ್ಟರೆ, ಅವರಿಗೆ ಎಷ್ಟು ಸಂತೋಷವಾಗುತ್ತಡದೋ :-ನಿಜವೆ. ನಾಳೆ ನಾಳಿದ್ದರೊಳಗೆ ಮನೆ ಬಾಡಿಗೆ ಕೊಡದಿದ್ದರೆ ಅವನು ಬಂದು ಮನೆಯಲ್ಲಿ ಸಾಮಾನು ಹೊರಗೆ ಹಾಕಿದರೆ ಎಷ್ಟು ಅವಮಾನ! ಈ ಹಣದಿಂದ ನಮ್ಮ ಸಮಸ್ಯೆಗಳೆಲ್ಲ ತೀರುತ್ತೆ. ಸುಖವಾಗಿ ತಂಗಿಯ ಮಾದುವೆ ಮಾಡಬಹುದು.-ಛೆ ಛೆ ಈ ಹಣ ನನಗೆ ಏಕೆ ಸಿಕ್ಕಿತು! ನನ್ನ ಮನಸೆಲ್ಲಾ ಕೆಟ್ಟೋಯಿತು. ಮತಾಪುತ್ರವಿರೋಧಾಯ ಹಿರಣ್ಯಾಯ ನಮೋ ನಮಃ”- ಇದನ್ನು ಅಪಹರಣ ಮಾಡಿದರೆ ಆ ಮುದುಕನಗತಿ ಏನಾಗುವುದು. ಪ್ರಾಣಬಿಟ್ಟರೂ ಬಿಡಬಹುದು. ಅವರ ಆತ್ಮಹತ್ಯಗೆ ನಾನು ಕಾರಣನಾಗುವನಲ್ಲವೆ? ಅದರಿಂದ ಎಷ್ಟು ಪಾಪ!- ನಿಜವೆ. ಪಾಪಪುಣ್ಯಗಳನ್ನು ನೋಡಿದರೆ ನಮ್ಮ ಕಷ್ಟಗಳು ಪರಿಹಾರವಾಗುವುದು ಹೇಗೆ? ಇದನ್ನು ವಾಪಸ್ಕೊಡುವುದು ಬೇಡ. ನಾನೇ ಉಪಯೋಗಿಸಿಕೊಳ್ಳುತ್ತೇನೆ ಅಂದುಕೊಂಡನು.
ಮಧ್ಯಾನ್ಹ ನಾಲಕ್ಕು ಘಂಟೆ ಆಯಿತು. ಮಾಧವನು ಎದ್ದು ಮುಖ ತೊಳಕೊಂಡು ಡ್ರೆಸ್ ಮಾಡಿಕೊಂಡನು. ತಾಯಿಯನ್ನು ಕರಕೊಂಡು ಹೋಗಿ ಹಿತ್ತಲ್ಲಲ್ಲಿದ್ದ ಬೃಂದಾವನ ಕಟ್ಟೆಯ ಮೇಲೆ ಕೂರಿಸಿಕೊಂಡು ಆಕೆಗೆ ಹಣ ಸಿಕ್ಕಿದ ವಿಷಯವನ್ನು ಸಮಗ್ರವಾಗಿ ಹೇಳಿದನು.” ಅಮ್ಮಾ ಈಗ ಕರ್ತವ್ಯವೇನು. ಇದನ್ನು ನಾವೇ ಉಪಯೋಗಿಸಿಕೊಳ್ಳುವುದಾ? ಇಲ್ಲದಿದ್ದರೆ ಅವರಿಗೆ ವಾಪಸ್ಸ್ ಕೊಡುವುದಾ? ನಿನ್ನ ಅಭಿಪ್ರಾಯ ಹೇಳಮ್ಮ!” ಎಂದು ಕೇಳಿದನು. ಆ ತಾಯಿಯ ಸಂಸ್ಕಾರವೇ ಬೇರೆ ಎಷ್ಟು ಪುರಾಣ ಕತೆಗಳನ್ನು, ಧಾರ್ಮಿಕ ವಿಷಯಗಳನ್ನು ಕೇಳಿ ಜೀರ್ಣಿಸಿ ಕೊಂಡಿದ್ದವರು.
ಸತ್ಯಕ್ಕೆ ನ್ಯಾಯಕ್ಕೆ ಮಹತ್ತರ ತ್ಯಾಗಗಳನ್ನು ಮಾಡಿದ್ದ ಮಹನೀಯರ ಕಥೆಗಳಿಂದ ವಿಶಿಷ್ಟವಾದ ಸಂಸ್ಕಾರವನ್ನು ಹೊಂದಿದ್ದ ಮುದಿಕಿ ಆಕೆ. ತಾತ್ಕಾಲಿಕವಾಗಿ ದರಿದ್ರವನ್ನು ಅನುಭವಿಸುತ್ತಾಯಿದ್ದರೂ, ಆಕೆಯ ಮನಸ್ಸು ಚಂಚಲವಾಗಲಿಲ್ಲ. ದೃಢ ಮನಸ್ಕಳಾಗಿ ಆಕೆ ಮಗನಿಗೆ ಹೋಗಿ ಹೇಳಿದರು “ ಮಗೂ! ಈ ಹಣ ನಮಗೆ ಬೇಡಪ್ಪ. ಇದರಿಂದ ನಾವು
ವೃದ್ಧಿಯಾಗುವುದಿಲ್ಲ. ಇದನ್ನು ಕಳಕೊಂಡವರ ಕಣ್ಣೀರು ನಮಗೆ ಪನ್ನೀರು ಆಗುವುದಿಲ್ಲ. ನಮ್ಮ ಕಷ್ಟಗಳು ಹಾಗೆಯೇ ಇರುವುದಿಲ್ಲ. ಒಳ್ಳೇ ಕಾಲ ನಮಗೂ ಬರುತ್ತದೆಯೆಂಬುವ ಆಶೆಯಿಂದ ಈ ಕಷ್ಟ ಕಾಲವನ್ನು ಹ್ಯಾಗೋ ಕಳೆಯೋಣ. ಪರಿಶುಧ್ದವಾಗಿ ಬದುಕಿದ ನಿಮ್ಮ ತಂದೆಯವರಿಗೆ ತಕ್ಕ ಮಗನು ಅನ್ನಿಸಿಕೊ ಮಗೂ! “ ಪಾಪ ಇದನ್ನು ಕಳೆದುಕೊಂಡಿದ್ದವರು ಎಷ್ಟು ಅಳುತ್ತಿದ್ದರೋ. ಎಷ್ಟು ಅಶಾಂತರಾಗಿದ್ದಾರೋ. ಅವರ ಮನಸ್ಸಿಗೆ ಸಂತೋಷಮಾಡುವುದು ನಮ್ಮ ಧರ್ಮವಲ್ಲವೇ? ಹೋಗಪ್ಪಾ! ಒಂದೇ ಮನಸ್ಸಿನಿಂದ ಹೋಗಿ ಅವರಿಗೆ ಕೊಟ್ಟುಬಿಡು” ಯೆಂದು ಖಚಿತವಾಗಿ ಹೇಳಿದರು. ಆ ತಾಯಿಯ ಮಗ ಮಾಧವಮೂರ್ತಿ. ಅವನಿಗೆ ತಾಯಿ ಪ್ರತ್ಯಕ್ಷ ದೈವ. “ಹಾಗೇ ಮಾಡ್ತೀನಮ್ಮ” ಯೆಂದು, ತಾಯಿಯ ಪಾದಗಳಿಗೆ ನಮಸ್ಕಾರ ಮಾಡಿ, ಪೂಜಾ ಮಂದಿರದಲ್ಲಿದ್ದ ಇಷ್ಟ ದೇವರಿಗೆ ಕೈ ಮುಗಿದು ಕ್ಕಾಶ್ ಬ್ಯಾಗನ್ನು ತೆಗೆದುಕೊಂಡು ಹೊರಟನು.
ಮಾಧವಮೂರ್ತಿ ಆಟೋವೊಳಗೆ ಹೋದರೆ ಯೂನಿಯನ್ನಿಂದ ಆಕ್ಷೇಪಣೆ ಬರುತ್ತೆ. ನಾಳೆ ಹೋಗಿ ಕೊಡೋಣ ಅಂದರೆ ಅಷ್ಟರೊಳಗೆ ತನ್ನ ಬುದ್ಧಿಯಲ್ಲಿ ಬದಲಾವಣೆ ಆಗಬಹುದು. ಆ ಮುದುಕನ ಸ್ಥಿತಿ ವಿಷಾದಾಂತವಾದರೂ ಆಗಬಹುದು. ಈಗಲೇ ಮಲ್ಲೇಶ್ವರಕ್ಕೆ ನಡುಕೊಂಡು ಹಾಗೆ ಅವರಿಗೆ ಇದನ್ನು ಕೊಟ್ಟು ಅವರ ಸಂತೋಷವನ್ನು ನೋಡೋಣ. ಅಮ್ಮನ ಮಾತಿನ ಪ್ರಕಾರ ನಡಕೊಂಬೋಣಯೆಂದು ಹೊರಟನು.
ಆ ದಿನ ಶುಕ್ರವಾರ. ಸಾಯಂಕಾಲ ಎಷ್ಟೋ ಕಳಕಳೆಯಾಗಿ ಇರಬೇಕಾದ ಶಾಮಣ್ಣನವರ ಮನೆ ನಿರುತ್ಸಾಹದಿಂದ ತೇಜೋಹೀನವಾಗಿತ್ತು. ಸಾಯಂಕಾಲ ಆರು ಘಂಟೆ ಆಯಿತು. ಈಜೀಚೇರಿ ನಲ್ಲಿ ಮಲಗಿದ್ದ ಶಾಮಣ್ಣನಿಗೆ ಅಂತರಾಳದಲ್ಲಿ ಒಂದು ಆಶಾರೇಖೆ ಉದಯಿಸಿತು. ಆಟೋ ಡೈವರ್ ಉತ್ತಮವಾಗಿ ಕಾಣುತ್ತಾನೆ. ಅಕ್ರಮಾರ್ಜನೆಯಲ್ಲಿ ಅವನಿಗೆ ಮನಸಿಲ್ಲ. ಕ್ಯಾಶ್ ಬ್ಯಾಗ್ ಅವನ ಕಣ್ಣಿಗೆ ಬಿದ್ದಿದ್ದರೆ ತಪ್ಪದೆ ವಾಪಸು ಬರುತ್ತೆ. ಏನೋ ನೋಡೋಣ ಆಂದು ಕೊಂಡರು. ಎದ್ದು,ಮುಖತೊಳೊಕೊಂಡು, ಕಾಫೀ ಕುಡಿದು,ಮಗ್ಗಲಲ್ಲೇ ಇದ್ದ ಸತ್ಯನಾರಾಯಣಸ್ವಾಮಿ ಗುಡಿಗೆ ಹೋಗಿ, ಪ್ರದಕ್ಷಿಣೆ ನಮಸ್ಕಾರಗಳನ್ನು ಮಾಡಿ, ತೀರ್ಥ ಸ್ವೀಕರಿಸಿ, ಹಣೆಗೆ ವಿಭೂತಿ ಇಟ್ಟುಕೊಂಡು
ಮನೆಗೆ ಬಂದರು. ಮನೆಯಲ್ಲಿ ದೇವರಿಗೂ, ತಂದೆ ತಾಯಿಯರ ಫೊಟೋಗಳಿಗೂ ನಮಸ್ಕಾರ ಮಾಡಿದರು. ಬೆಡ್ ರೂಮ್ ನಲ್ಲಿ ಲೈಟ್ ಹಾಕಿ, ಮಂಚದ ಮೇಲೆ ಸುತ್ತಿಟ್ಟಿದ್ದ ಹಾಸಿಗೆಗೆ ಒರಗಿಕೊಂಡರು. ಬೆಳೆಗ್ಗೆಯಿಂದ ಪೇಪರ್ ನೋಡಲಿಲ್ಲ ನೋಡೋಣ ಯೆಂದು ಡೆಕ್ಕನ್ ಹೆರಾಲ್ಡ್ ತೆಗೆದರು. ಆಗಲೂ ಅವರ ಮನಸ್ಸು ಅದರ ಮೇಲೆ ನಿಲ್ಲಲಿಲ್ಲ. ಪೇಪರ್ ಮುಖದಮೇಲೆ ಹಾಕಿಕೊಂಡು ಹಾಗೇ ಆಲೋಚನೆಯಲ್ಲಿ ಬಿದ್ದರು.
ಮಾಧವಮೂರ್ತಿ ನಡೆದು ಕೊಂಡು ಏಳು ಘಂಟೆಗೆ ಶಾಮಣ್ಣನವರ ಮನೆಗೆ ಹೋದನು. ಹೊರಗಡೆ ಯಾರೂ ಕಾಣಿಸಲಿಲ್ಲ. “ಸಾರ್! ಸಾರ್! ಯೆಂದು ಕೂಗಿದನು. ಯಾರೂ ಬರಲಿಲ್ಲ. ಸ್ವಲ್ಪ ಸ್ವರ ಹೆಚ್ಚಿಸಿ” ಅಮ್ಮಾ!ಅಮ್ಮಾ! ಯಜಮಾನ್ರಿದ್ದಾರೇನಮ್ಮ” ಎಂದು ಕೂಗಿದ. ಒಬ್ಬ ಹುಡುಗ ಬಂದು ಅವರಿಗೆ ಮಯ್ಯಲ್ಲಿ ಹುಷಾರಿಲ್ಲ, ನಾಳೆ ಬನ್ನಿಯೆಂದು ಹೇಳಿದನು. ಹೆಚ್ಚು ಕೆಲಸವಿಲ್ಲ ಎರಡೇ ನಿಮಿಷ ಮಾತಾಡಿ ಹೋಗ್ತೀನಿ ಕರೀರಿ ಅಂದನು. ಒಳಗಿಂದ ಶಾಮಣ್ಣನವರ ಹೆಂಡತಿ ಬಂದು “ ಯಾರಪ್ಪ! ಈಗ ಅವರಿಗೆ ಆರೋಗ್ಯ ಚೆನ್ನಾಗಿಲ್ಲ. ನಾಳೆ ಬನ್ನಿಯಪ್ಪಾ” ಅಂದರು. ಅಲ್ಲ ತಾಯಿ ಆಟೋ ಡ್ರ್ಯೆವರ್ ಬಂದಿದ್ದಾನೆ ಅಂತ ಹೇಳಿರಿ. ಅವರ ಆರೊಗ್ಯ ಸರಿಹೋಗುತ್ತೆ ಅಂದನು. ಆಕೆ ಹೌದಾ?ನೀವು ಆಟೋ ಡ್ರೈವರಾ? ಬೆಳಗ್ಗೆ ಬಂದಿದ್ದು ನೀವೇನಾ? ನಮ್ಮ ಹಣ….ಏನ್ರೀ ಬನ್ನೀಇಲ್ಲಿಯೆಂದು ಶಾಮಣ್ಣನನ್ನು ಗದ್ಗದ ಸ್ವರದಿಂದ ಕರೆದರು. ಶಾಮಣ್ಣನವರು ಆಶೆಯಿಂದ ಹೊರಕ್ಕೆ ಬಂದರು. ಮಾಧವಮೂರ್ತಿ ಅವರಿಗೆ ನಮಸ್ಕಾರಮಾಡಿ, ಕೂಡ್ರಿ ಸ್ವಾಮಿಯೆಂದು ಅವರ ತೊಡೆ ಮೇಲೆ ಕ್ಯಾಶ್ ಬ್ಯಾಗನ್ನು ತೆಗೆದು ಅವರಿಗೆ ಕೊಟ್ಟು, ಹಣ ನೋಡಿಕೊಳ್ಳಿ ಸ್ವಾಮಿ ಎಣಿಸಿಕೊಳ್ಳಿ” ಆಂದನು. ಶಾಮಣ್ಣ ಹಣವನ್ನು ನೋಡಿ, ಇದು ಕನಸಾ ನಿಜವೇ ಯೆಂದು, ಆಶ್ಚರ್ಯಪಟ್ಟು, ಕಣ್ಣೀರು ಬಿಡುತ್ತಾ ಮಾಧವಮೂರ್ತಿಯನ್ನು ತಬ್ಬಿಕೊಂಡರು. ನೀನು ಎಂತ ನಿಜಾಯತಿಪರನಯ್ಯ. ಇದರ ಆಶೆ
ಬಿಟ್ಟಿದ್ದ ನಮಗೆ ಎಷ್ಟು ಸಂತೋಷಮಾಡಿದೆಯಯ್ಯ ಎಂದು ಹೊಗಳಿದರರು. ಮನೆಯಲ್ಲಿಯೆಲ್ಲರೂ ಸೇರಿ ಅವರ ಸಂತೋಷವನ್ನು ಒಬ್ಬರಿಗೊಬ್ಬರು ಹೇಳಿಕೊಂಬುವಲ್ಲಿ ನಿಮಗ್ನರಾದರು. ಅವರ ಸಂತೋಷವನ್ನು ನೋಡಿದ ಮಾಧವಮೂರ್ತಿ “ನಾನು ಧನ್ಯನಾದೆನು ” ಅಂದು ಕೊಂಡನು. “ಬರ್ತೀನಿ ಸ್ವಾಮೀ” ಎಂದು ಹೊರಡಲು ಸಿದ್ಧನಾದ ಮಾಧವಮೂರ್ತಿಯನ್ನು ನಿಲ್ಲಿಸಿ ಶಾಮಣ್ಣ ನವರು ಆತನಿಗೆ ಬಲವಂತಮಾಡಿ ಕಾಫಿ ಕೊಟ್ಟರು. ಆತನ ಅಡ್ರೆಸ್ ತೆಗೆದುಕೊಂಡು ಶುಭ ಲೇಖನವನ್ನು ಕೊಟ್ಟು, ನಿನ್ನಿಂದ ನಮ್ಮ ಮಗಳ ಮದುವೆ ಆಗುತ್ತೆ. ನಿನ್ನ ಸಹಾಯಕ್ಕೆ ಕೃತಜ್ಞನು. ಮದುವೆಗೆ ನೀವೂನಿಮ್ಮ ಹೆಂಡತಿ ಮಕ್ಕಳೂ ಎಲ್ಲಾರೂ ತಪ್ಪದೇಬರಬೇಕೆಂದು ಆಹ್ವಾನಿಸಿ, ತಾಂಬೂಲದಲ್ಲಿ ಒಂದು ಸಾವಿರ ರೂಪಾಯಿಯಿಟ್ಟುಕೊಟ್ಟರು. ಮಾಧವಮೂರ್ತಿ “ಬೇಡ ಸ್ವಾಮಿ! ಇದರಲ್ಲಿ ನಾನು ಮಾಡಿದ್ದೇನೂ ಇಲ್ಲ ನಿಮ್ಮ ಹಣ ನಿಮಗೆ ಸೇರಿಸಿದ್ದೇನೆ ಅಷ್ಟೇ. ನನಗೇನೂ ಬೇಡ.” ಅಂದನು. ಎಷ್ಟು ಬಲವಂತ ಮಾಡಿದರೂ ಬರೀ ತಾಂಬೂಲ ಮಾತ್ರ ತಕೊಂಡು ಮಾಧವಮೂರ್ತಿ, ದಂಪತಿಯರಿಗೆ ನಮಸ್ಕಾರಮಾಡಿ ಅವರ ಆಶೀರ್ವಾದಗಳನ್ನು ಹೊಂದಿ ಹೊರಟನು.
ಸಮಾಜದಲ್ಲಿ ಎಲ್ಲಿ ನೋಡಿದರೂ ಸ್ವಾರ್ಥ,ಅನ್ಯಾಯ, ಅಕ್ರಮ, ಮೋಸ, ಪರಹಿಂಸೆ, ಪರವಿತ್ತಾಪಹರಣ ಬೇರೂರಿರುವ ಈ ಕಾಲದಲ್ಲಿ ಕೂಡ ಇಂಥಾ ಉತ್ತಮರು, ಸತ್ಯಸಂಧರು, ಧರ್ಮಾತ್ಮರು, ಇದ್ದಾರೆಂಬುವುದು ಈಗ ಗೊತ್ತಾಯಿತು ಎಂದು ಶಾಮಣ್ಣನವರು ಹೊಂದಿದ ಆನಂದಕ್ಕೆ ಅವಧಿಗಳಿಲ್ಲ.
ಮರುದಿನ ಎಲ್ಲಾ ಪೇಪರುಗಳಲ್ಲಿ “ ಆಟೋ ಡ್ರೈವರ್ ಮಾಧವಮೂರ್ತಿಯ ನಿಜಾಯಿತಿ” ಯೆಂದು, ಆತನ ಫೋಟೋ ಹಾಕಿ, ದೊಡ್ಡ ದೊಡ್ಡ ಅಕ್ಷರಗಳಿಂದ ಮೊದಲನೇ ಪೇಜಿನಲ್ಲಿ ಪ್ರಕಟಿಸಿದ್ದರು.
ಶ್ಯಾಮಣ್ಣನವರ ಮನೆಯಲ್ಲಿ ನಡಿಯುತ್ತಿದ್ದ ಮದುವೆಯ ಮಂಗಳವಾದ್ಯಧ್ವನಿಗಳು ಸಾಗರ ಘೋಷದಂತೆ ಶ್ರುತಿ ಶುಭವಾಗಿತ್ತು.